ನಮ್ಮ ಕಂಕಣ ಬಳಗದ ಕನ್ನಡ ಮಾತಾಡಿ ಅಭಿಯಾನ ಕಳೆದ ಮೂರು ವರ್ಷಗಳಿಂದ ನಡೆಯುತ್ತಾ ಇರೋದು ತಮಗೆಲ್ಲಾ ಗೊತ್ತಿರುವ ವಿಷಯ. ಇದುವರೆಗೆ ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ಕನ್ನಡಿಗರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿ ಒಟ್ಟು 22 ಅಭಿಯಾನವನ್ನು ನಡೆಸಿಕೊಂಡು ನಮ್ಮದೊಂದು ವಿಭಿನ್ನ, ಶಿಸ್ತುಬದ್ಧ, ಯಾರಿಗೂ ತೊಂದರೆ ನೀಡದೆ ಮೌನವಾಗಿ ನಮ್ಮ ಉದ್ದೇಶವನ್ನು ಜನರಿಗೆ ತಲುಪಿಸುವಲ್ಲಿ ನಮ್ಮ ಕಾರ್ಯವನ್ನು ಮಾಡಿಕೊಂಡು ಬಂದಿದ್ದೇವೆ. ನಮ್ಮ ಈ ಎಲ್ಲಾ ಅಭಿಯಾನದ ಸಮಯದಲ್ಲಿ ಅನೇಕ ಜನರು ನಮಗೆ ಪ್ರೋತ್ಸಾಹ ಹಾಗೂ ತಾವು ಕೂಡ ನಮ್ಮ ಜೊತೆ ಭಾಗಿಯಾಗಿ ಬೆಂಬಲ ನೀಡಿದ್ದಾರೆ. ನಮ್ಮ ಬಳಗದ ಮುಂದಿನ ಅಭಿಯಾನ ನಡೆದದ್ದು ಸಾಂಸ್ಕೃತಿಕ ನಗರಿ ಎಂದೇ ಪ್ರಸಿದ್ಧಿ ಪಡೆದ ಮೈಸೂರಿನಲ್ಲಿ. 83 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಮ್ಮ ಈ ಬಾರಿಯ ಕನ್ನಡ ಮಾತಾಡಿ ಅಭಿಯಾನ ನಿಜಕ್ಕೂ ಹೊಸ ಅನುಭವ, ವರ್ಣಿಸಲಾಗದ ಖುಷಿಯನ್ನು ನೀಡಿರುವದರಲ್ಲಿ ಯಾವುದೇ ಸಂದೇಹವಿಲ್ಲ. ಇದೇ ಮೊದಲ ಬಾರಿಗೆ ನಮ್ಮ ಅಭಿಯಾನ ಬೆಂಗಳೂರಿನಿಂದ ಆಚೆ ನಡೆದಿರುವುದು ಹಾಗೇ ಕನ್ನಡ ಸಾಹಿತ್ಯ ಲೋಕದ ದೊಡ್ಡ ಹಬ್ಬ ಎಂದೇ ಕರೆಯಲ್ಪಡುವ ಸಾಹಿತ್ಯ ಸಮ್ಮೇಳನದಲ್ಲಿ ನಮ್ಮ ಅಭಿಯಾನ ಮಾಡಿರೋದು ನಮ್ಮ ಪಾಲಿಗೆ ಹೆಮ್ಮೆಯ ವಿಷಯ. ಬಿರು ಬಿಸಿಲಿದ್ದರೂ ಪ್ರಯಾಣದ ಆಯಾಸ ಇದ್ದರೂ ಮಧ್ಯಾಹ್ನದ ವೇಳೆಯಲ್ಲಿ ನಡೆದರೂ ಯಾವುದನ್ನು ಲೆಕ್ಕಿಸದೇ ಕನ್ನಡದ ಮೇಲಿನ ಪ್ರೀತಿ, ಅಭಿಮಾನ,ಉತ್ಸಾಹ, ಇವೆಲ್ಲವನ್ನೂ ಕ್ಷಣಮಾತ್ರದಲ್ಲಿ ಮರೆಸಿ ಮೈಸೂರಿನ ಹಾಗೇ ರಾಜ್ಯದ ವಿವಿಧ ಜಿಲ್ಲೆಯಿಂದ ಬಂದ ಸಾಹಿತ್ಯಾಸಕ್ತರ ಮನಸ್ಸನ್ನು ಸೆಳೆಯುವಲ್ಲಿ ಯಶಕಂಡು ನಮ್ಮ ಎಲ್ಲಾ ಸದಸ್ಯರ ಮೊಗದಲ್ಲಿ ನಗೆಯ ಚಿಲುಮೆಯನ್ನು ಇಮ್ಮಡಿಗೊಳಿಸಿತು. ಕೆಲವೊಂದು ಜನ ಅದು ಸರಿ ಇಲ್ಲ ಇದು ಸರಿ ಇಲ್ಲ ಅಂದರೂ ಅವರ ಪ್ರಶ್ನೆಗೆ ಅಷ್ಟೇ ಶಾಂತಚಿತ್ತರಾಗಿ ನಮ್ಮ ಉದ್ದೇಶಗಳನ್ನು ತಿಳಿಸಿ ಅವರ ಮನಸ್ಸಿನಲ್ಲಿ ಇದ್ದ ಗೊಂದಲಗಳನ್ನು ಬಗೆಹರಿಸುವ ಕಾರ್ಯ ಕೂಡ ಮಾಡಿದ್ದು ಸಂತಸದ ವಿಷಯ. ನಮ್ಮ ಈ ಪ್ರಯತ್ನದಿಂದ ಕನ್ನಡಿಗರು ಮೊದಲು ಕನ್ನಡವನ್ನು ಅತ್ಯಂತ ಪ್ರೀತಿಯಿಂದ ಎಲ್ಲಾ ಕಡೆ ಜಾಸ್ತಿಯಾಗಿ ಮಾತನಾಡಿ ಕರುನಾಡಿನಲ್ಲಿ ಇರಬೇಕಾದರೆ ಕನ್ನಡ ಅವಶ್ಯಕ ಎನ್ನುವ ಅನಿವಾರ್ಯ ಪರಿಸ್ಥಿತಿ ಸೃಷ್ಟಿ ಮಾಡಬೇಕು. ಆಗ ಮಾತ್ರ ನಮ್ಮ ರಾಜ್ಯದಲ್ಲಿ ಉದ್ಯೋಗ ನಿಮಿತ್ತ ಬಂದು ಹಾಗೇ ಇಲ್ಲೇ ವಾಸವಾಗಿರುವ ಅನ್ಯಭಾಷಿಕರಿಗೆ ಕನ್ನಡ ಕಲಿಯದಿದ್ದರೆ ಇಲ್ಲಿ ಇರೋದು ಸಾಧ್ಯವಿಲ್ಲ ಎಂದು ಅನಿಸಿ ಕನ್ನಡ ಕಲಿಯುವ ಆಸಕ್ತಿ ಬರಬಹುದು. ಇದೆಲ್ಲಾ ಸಾಧ್ಯ ಅಂತ ಮಾಡಬೇಕಾದವರು ನಾವುಗಳು. ಮೊದಲು ನಾವು ಬದಲಾಗಬೇಕು. ನಂತರ ಇನ್ನೊಬ್ಬರನ್ನು ಬದಲಾಯಿಸುವ ಪ್ರಯತ್ನ ಮಾಡಬೇಕು. ಅದು ಆದಾಗ ಮಾತ್ರ ನಮ್ಮ ಕರುನಾಡಿನಲ್ಲಿ ಕನ್ನಡದ ಡಿಂಡಿಮ ಪ್ರತಿದಿನ, ಪ್ರತಿಕ್ಷಣ ಮೊಳಗಲು ಸಾಧ್ಯ.
ಕನ್ನಡಿಗರೇ ಮೊದಲು ನೀವು ಕನ್ನಡ ಮಾತಾಡಿ ಇಷ್ಟೇ ನಮಗೆ ಬೇಕಾಗಿರೋದು. ಮಾತಾಡ್ತಿರಾ ಹಾಗೇ 2000 ವರ್ಷಗಳಷ್ಟು ಹಳೆಯ ಇತಿಹಾಸ ಹೊಂದಿರುವ ನಮ್ಮ ಈ ಕನ್ನಡದ ಕಂಪನ್ನು ವಿಶ್ವಮಟ್ಟಕ್ಕೆ ಪಸರಿಸುವಂತೆ ಮಾಡೋಣ.
ಧನ್ಯವಾದಗಳೊಂದಿಗೆ,
ಪ್ರವೀಣ ಕಾಗಾಲ.
ಕುಮಟಾ. ಉತ್ತರ ಕನ್ನಡ.