ಸೋಮವಾರ, ಡಿಸೆಂಬರ್ 17, 2018

ಪುನರ್ಜನ್ಮ ನೀಡಿದ ಬಾಲಕ

ಈ ಜೀವನವೆಂಬ ಪದದಲ್ಲಿ ಜೀವ ಅನ್ನೋ ಪದಕ್ಕೆ ಎಷ್ಟು ಬೆಲೆ ಇದೆ ಎಂದು ಗೊತ್ತಾಗೊದು ನಾವು ಸಾವಿನ ದವಡೆಯಿಂದ ಪಾರಾದಾಗಲೇ ಅರ್ಥ ಆಗೋದು.. ಅದಕ್ಕೆ ಈ ಜೀವವನ್ನು ನಾವು ಮಾಡೋ ಸಣ್ಣ ತಪ್ಪಿಗೆ ನಾವೇ ಶಿಕ್ಷೆ ಕೊಟ್ಟುಕೊಳ್ಳುವುದು ಎಷ್ಟರಮಟ್ಟಿಗೆ ಸರಿ .. ಅಲ್ವಾ....!!!
ಈ ಬದುಕಿನ ಪಯಣದಲ್ಲಿ ನಾವು ಸಾಗೋ ದಾರಿಯಲ್ಲಿ ಕಷ್ಟ, ನಷ್ಟ, ಸುಖ,ದು:ಖ,ನಿರಾಶೆ,ಯಶಸ್ಸು, ತ್ಯಾಗ, ಇನ್ನೂ ಏನೇನೋ ಬರುತ್ತದೆ. ಅವೆಲ್ಲವನ್ನೂ ನಾವು ಸರಿಸಮಾನವಾಗಿ ಸ‍್ವೀಕರಿಸಿ ಜೀವನದಲ್ಲಿ ಏನಾದರು ಸಾಧನೆ ಮಾಡೋದು ಬದುಕಿಗೆ ನಾವು ಕೊಡುವ ಒಂದು ಅರ್ಥಪೂರ್ಣ ಕೊಡುಗೆ.
ಹೀಗೆ ನನ್ನ ಜೀವನ ಕೂಡ ಸಾಗುತ್ತಿದೆ.. ಯಶಸ್ಸು ಹಾಗೇ ಸಾಧನೆ ಮಾಡುವ ಯತ್ನದಲ್ಲಿ ನಾನು  ಸಾಗಿ ಬಂದ ದಾರಿಯ ಬಗ್ಗೆ ಒಂದು ಮೆಲುಕು ..
ಅಂದು ನಾನು ಪ್ರೌಢಶಾಲೆಯ ಒಂಬತ್ತನೆಯ ತರಗತಿಯಲ್ಲಿ ಓದುತ್ತಾ ಇದ್ದ ಸಮಯ..
ಹೋಳಿ ಹಬ್ಬ ಅಂದ್ರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ.. ಬಣ್ಣಗಳ ನಡುವೆ ಓಕುಳಿಯಾಟ ಆಡುವುದೇ ಒಂದು ಚೆಂದದ ಅನುಭವ.. ಹಾಗೆಯೇ ನಮ್ಮ ಊರಿನಲ್ಲಿ ಈ ಹೋಳಿ ಹಬ್ಬದ ಸಮಯದಲ್ಲಿ ಒಂದು ಸಂಪ್ರದಾಯ ಇದೆ ಕಾಮದಹನ ಮಾಡಿ ನದಿ ತೀರದಲ್ಲಿ ಸ್ನಾನ ಮಾಡಿ ಆಮೇಲೆ ಪೂಜಾ ಕಾರ್ಯಕ್ರಮ .. ಪ್ರತಿ ಮನೆಯಿಂದ ಒಬ್ಬರು ಹೋಗಬೇಕೆಂಬ ನಿಯಮ ಬೇರೆ. ನಮ್ಮ ತಂದೆಯವರ ಬದಲಿಗೆ ನಾನೇ ಹೋಗಿದ್ದೆ. ಹೀಗೇ ಬಣ್ಣಗಳನ್ನು ಎರಚಾಡುತ್ತ ಅಲ್ಲೇ ಅಕ್ಕ ಪಕ್ಕದ ಮನೆಯವರಿಂದ ಹಣ,ಕಾಯಿ ಹಾಗೂ ಇನ್ನಿತರ ವಸ್ತುಗಳನ್ನು ಸಂಗ್ರಹಣೆ ಮಾಡುತ್ತ ಸಾಗಿತು ನಮ್ಮ ಪಯಣ. ಅಂತೂ ಕಾಮದಹನ ಮಾಡೋ ಸ್ಥಳವನ್ನು ಮಟ ಮಟ ಮಧ್ಯಾಹ್ನ ೨ ಗಂಟೆಗೆ ತಲುಪಿದ್ದಾಯ್ತು. ಇನ್ನೂ ನಮ್ಮ ಜೊತೆ ತೆರಳಿದ್ದ ಹಿರಿಯರ ಮಾರ್ಗದರ್ಶನದಲ್ಲಿ ನಮ್ಮ ಊರಿನ ಯುವಕರು ಕಾಮದಹನಕ್ಕೆ ಸಿದ್ಧತೆ ಮಾಡತೊಡಗಿದರು. ನಾವು ಅದನ್ನು ಬೆರಗುಗಣ್ಣಿನಿಂದ ನೋಡುತ್ತಾ ನಿಂತೆವು. ಎಲ್ಲಾ ತಯಾರಿ ಆದ ಮೇಲೆ ಹಿಂದಿನಿಂದ ನಡೆದು ಬಂದ ಸಂಪ್ರದಾಯದಂತೆ ನದಿಯ ಮಧ್ಯ ಕಾಮದಹನ ಮಾಡಿ ಕುಣಿದು ಕುಪ್ಪಳಿಸಿ ಆಯ್ತು. ನಂತರ ಸ್ನಾನ ಮಾಡಿ ಅಲ್ಲೆ ಅನತಿ ದೂರದಲ್ಲಿ ಇದ್ದ ಊರ ಕಾಯುವ ಜಟಕ ದೇವರಿಗೆ ಪೂಜಾ ಕಾರ್ಯಕ್ರಮಕ್ಕೆ ಹೋಗಬೇಕು. ಎಲ್ಲರೂ ಆಗಲೆ ನೀರಿಗೆ ಇಳಿದು ಸ್ನಾನ ಮಾಡುತ್ತಾ ಇದ್ದರು. ನನ್ನ ಮನದಲ್ಲಿ ಒಂದು ಅಳಕು ಬೇರೆ .. ನನಗೆ ಈಜಾಡಲು ಬರುತ್ತಿರಲಿಲ್ಲ. ಆದರೂ ಗಟ್ಟಿ ಮನಸು ಮಾಡಿಕೊಂಡು ನೀರಿಗೆ ಇಳಿದದ್ದು ಆಯ್ತು..
ನನ್ನ ಗ್ರಹಾಚಾರಕ್ಕೆ ನಾನು ಇಳಿದ ಸ್ಥಳದಲ್ಲಿ ತುಂಬಾ ಆಳ ಬೇರೆ ಇತ್ತು. ಆ ಸ್ಥಳದಲ್ಲಿ ಯಾರು ಕೂಡ ಇಳಿಯದೆ ಬೇರೆ ಕಡೆ ಹೋಗಿ ಈಜಾಡುತ್ತ ಇದ್ದರು. ನಾನು ತಿಳಿದೋ ತಿಳಿಯದೋ ತಪ್ಪು ಮಾಡಿದೆ ಅಂತ ಅನಿಸಿದ್ದು ಆಗಲೇ..
ಸ್ವಲ್ಪಮಟ್ಟಿಗೆ ಕೈ ಕಾಲು ಆಡಿಸುತ್ತ ಈಜಲು ಪ್ರಯತ್ನಿಸಿದೆ. ಕೆಲ ಸಮಯದ ನಂತರ ಈಜಲು ಕಷ್ಟವಾಗತೊಡಗಿತು. ಆಗ ಮನಸ್ಸಿನಲ್ಲಿ ಒಂದು ರೀತಿಯ ಭಯ ಆವರಿಸಲಾರಂಬಿಸಿತು. ಜೀವ ಉಳಿಸಿಕೊಳ್ಳೊಕೆ ಬೇರೆ ದಾರಿ ಇಲ್ಲಾ. ಎಂದು ಅರಿವಾಯಿತು.  ನನ್ನ ಈ ಜೀವ ಈ ನದಿಯಲ್ಲಿ ಅಂತ್ಯ ಎಂದು ಅನಿಸಿಬಿಟ್ಟಿತು. ಹಾಗೇ ಮುಳುಗುತ್ತಾ ಹೋದೆ...
ಒಂದು ಕೈ ಮಾತ್ರ ಮೇಲಕ್ಕೆ ಕಾಣ್ತಾ ಇತ್ತು. ಮನದಲ್ಲಿ ಅನಿಸಿತು ಈ ಜೀವ ಪಾಪನಾಶಿನಿ ಅಂತ ಅನಿಸಿಕೊಂಡ ಈ ಅಘನಾಶಿನಿ ನದಿಗೆ ಅರ್ಪಣೆ ಎಂದು. ನನ್ನ ಜೀವ ಇನ್ನೂ ಇರಬೇಕೆಂದು ಇತ್ತೆನೋ ಗೊತ್ತಿಲ್ಲ .. ಮುಳುಗುತಿದ್ದ ನನ್ನ ಕೈಯನ್ನು ಯಾರೋ ಹಿಡಿದ ಅನುಭವ ಆಯಿತು.
ಅಬ್ಬಾ ಬದುಕಿತು ಬಡ ಜೀವ ಅಂತ ಅನಿಸಿ ಆ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಿದೆ. ಪುಣ್ಯ ಅಲ್ಲೇ ಪಕ್ಕದಲ್ಲಿ ಬೋಟ್ ಬೇರೆ ಇತ್ತು. ಅದರಲ್ಲಿದ್ದ ಹಗ್ಗದ ಸಹಾಯದಿಂದ ಮೇಲಕ್ಕೆ ಎದ್ದು ಬಂದೆ.
ನಿಜಕ್ಕೂ ಮನದಲ್ಲಿ ನನ್ನ ಕಾಪಾಡಿದ ಆ ಹುಡುಗನನ್ನು ಕಂಡು ಧನ್ಯತಾಭಾವ ಮೂಡಿತು. ವಯಸ್ಸಿನಲ್ಲಿ ನನಗಿಂತ ಚಿಕ್ಕವನಾದರೂ ಅವನ ಸಮಯಪ್ರಜ್ಞೆ ಇಂದ ನನ್ನ ಜೀವ ಉಳಿಯಿತು. ಎಷ್ಟು ಹೊಗಳಿದರು ಸಾಲದು ಆ ಹುಡುಗನ ಸಾಹಸ ಮನೋಭಾವನೆಗೆ. ಅಲ್ಲಿಂದ ಪೂಜೆ ಮುಗಿಸಿಕೊಂಡು ಮನೆಗೆ ತೆರಳಿದೆ. ಇಲ್ಲಿ ನಡೆದ ಯಾವ ವಿಷಯವನ್ನು ಮನೆಯಲ್ಲಿ ಯಾರ ಹತ್ತಿರ ಕೂಡ ಹೇಳಲಿಲ್ಲ. ಅಂದೇ ಕೊನೆ ಇಂದಿನವರೆಗೂ ಹೋಳಿ ಹಬ್ಬ ಅಂದ್ರೆ ದೂರ ದೂರ..
ಇದು ಸಾವಿನಿಂದ ದೂರಾದ ನನ್ನ ಕಥೆ...!!!!

ಸೋಮವಾರ, ಡಿಸೆಂಬರ್ 3, 2018

ಹನಿಗವನಗಳು

*ದರ್ಬಾರು*

ಚುನಾವಣಾ ಪೂರ್ವದಲ್ಲಿ
ಹೇಳಿದ್ದರು..
ನಿಮಗೆಲ್ಲಾ
ನೀರು - ಸೂರು..!!
ಆದರೆ.....
ಚುನಾವಣಾ ನಂತರ
ಮಾಡುತ್ತಿದ್ದಾರೆ
ಅಧಿಕಾರದ ಅಮಲಿನ
ದರ್ಬಾರು..!!!

ಪ್ರವೀಣ  ಕಾಗಾಲ.ಕುಮಟಾ.

ಭಾನುವಾರ, ಸೆಪ್ಟೆಂಬರ್ 23, 2018

ಹನಿಗವನಗಳು

ಕತ್ತಲೆಯೊಳಗೆ
ಕರಗುತ್ತಿದೆ ಅದೆಷ್ಟೋ
ಹೆಣ್ಣಿನ ಆಕ್ರಂದನ.
ಬದುಕ ಸವೆಸಲು
ಇಷ್ಟವಿಲ್ಲದಿದ್ದರೂ
ಕಳೆದುಕೊಳ್ಳಬೇಕಾಗಿದೆ
ಯೌವ್ವನ.

********

ನವ ಮಾಸದಿ
ಪಟ್ಟ  ಆ ನೋವು
ಮರೆಯಾಗುವುದು
ಕ್ಷಣ ಮಾತ್ರದಲಿ
ಮಡಿಲಲ್ಲಿರುವ
ಆ ಮುದ್ದು ಕಂದನ
ಅಳುವಿನ ಸದ್ದಿಗೆ...!!!

ಪ್ರವೀಣ  ಕಾಗಾಲ. ಕುಮಟಾ

ಭಾನುವಾರ, ಜುಲೈ 1, 2018

ನಮ್ಮ ಕರುನಾಡು


ಕರುನಾಡೆಂದರೆ ಕುಣಿಯುವ ನಾವು
ನಾ ಕನ್ನಡಿಗ ಎಂದರೆ ಕಿವಿಯು ನಿಮಿರುವುದು.
ಕರುನಾಡಿನ ಸಂಕಷ್ಟದ ಸಮಯದಿ
ಒಂದಾಗಿ ನಾವೆಲ್ಲ ಹೋರಾಡುವೆವು.

ನಾವೆಲ್ಲ ಕನ್ನಡಿಗರು
ಎಂದು ಅಭಿಮಾನ ಪಡುತ
ಕನ್ನಡಾಂಬೆಯ ಸಲುವಾಗಿ
ಜೀವ ತೊರೆಯುವೆವು.
ಕಷ್ಟದಲ್ಲಿರುವ ಜನರ
ಕೈ ಹಿಡಿಯುವೆವು ನಾವು.

ಬದುಕಿದ್ದಷ್ಟು ದಿನ ಕರುನಾಡಿನ
ಕನ್ನಡ ಭಾಷೆಯ ರಕ್ಷಣೆ ಮಾಡುತ
ನಾಡಗೀತೆಯ ಹಾಡುವೆವು.
ಕರುನಾಡಿನ ಏಳಿಗೆಗೆ ಶ್ರಮಿಸುತ
ಅನುದಿನವೂ ಕನ್ನಡದ ಸೇವೆಯ
ನಾವು ಮಾಡುವೆವು..

ಕನ್ನಡವೇ ನಮ್ಮ ಉಸಿರಾಗಿಹಿದು
ಕರುನಾಡಿನ ಹಿರಿಮೆಯ
ಜಗತ್ತಿಗೆ ಪಸರಿಸುವ
ಕೆಲಸವ ಸದಾ ಮಾಡುವೆವು
ನಾವೆಲ್ಲ ಅಭಿಮಾನದಿಂದ
ಹೇಳುವೆವು ಕನ್ನಡಿಗರೆಂದು..

~ ಪ್ರವೀಣ ಕಾಗಾಲ.

ಶನಿವಾರ, ಜೂನ್ 30, 2018

ನ್ಯಾನೊ ಕಥೆ - 2


ಅವನು ಯಾವಾಗಲೂ Facebook, whatsapp, ಅಂತ ಅದರಲ್ಲಿಯೇ ಮುಳುಗಿರುತ್ತಿದ್ದ. ಇದರಿಂದ ಅವನ ಪೋಷಕರು ಚಿಂತಾಕ್ರಾಂತರಾಗಿದ್ದರು. ಮಗ ದುಡಿಯುವ ಸಮಯದಲ್ಲಿ ದುಡಿಯದೇ ಈ ರೀತಿ ಸಮಯ ವ್ಯರ್ಥ ಮಾಡುತ್ತಿರುವುದು ಅವರಿಗೆ ಸ್ವಲ್ಪವೂ ಹಿಡಿದಿರಲಿಲ್ಲ. ಏನಾದರೂ ಮಾಡಿ ಇದನ್ನು ಬಿಡಿಸಬೇಕು ಅಂತ ಉಪಾಯ ಮಾಡಿದರೂ ಆಗಲಿಲ್ಲ. ಒಂದು ದಿನ ಪೇಟೆಗೆ ಹೋದ ಇವರು ಮನೆಗೆ ಬರುವಾಗ ತೀವ್ರವಾಗಿ ಅಪಘಾತದಿಂದ ಗಾಯಾಳು ಆಗುತ್ತಾರೆ. ಮಗನಿಗೆ ವಿಷಯ ಗೊತ್ತಾಗಿ ರಕ್ತದ ಅವಶ್ಯಕತೆ ಇದೆ ಎಂದು Facebook ಅಲ್ಲಿ status ಹಾಕಿ ಆಸ್ಪತ್ರೆಗೆ ಹೋಗುವಷ್ಟರಲ್ಲಿ ಅವನಿಂದ ಸಹಾಯ ಪಡೆದ ಅನೇಕ ಜನ ರಕ್ತ ಕೊಡಲು ಬಂದಿದ್ದರು. ಅವರಲ್ಲಿ ಕೆಲವರ ರಕ್ತ ಪಡೆದು ಚಿಕಿತ್ಸೆ ನೀಡಿ ಕೆಲವು ದಿನಗಳ ಬಳಿಕ ಆಸ್ಪತ್ರೆಯಿಂದ ವಾಪಸ್ ಮನೆಗೆ ಬರುತ್ತಾರೆ.
ಆಗ ಅವನು ತಂದೆ ತಾಯಿಗಳ ಬಳಿ ಬಂದು ಹೇಳುತ್ತಾನೆ .. ನಾನು ಇಡೀ ದಿನ Facebook ಅಲ್ಲಿ ಇರೋದು ಇದೇ ರಕ್ತದಾನದ ಕೆಲಸಕ್ಕೆ.  ಇಂದು ನನ್ನಿಂದ ಎಷ್ಟೋ ಜನ ತಮ್ಮ ಪ್ರಾಣವನ್ನು ಉಳಿಸಿಕೊಂಡು ನೆಮ್ಮದಿಯಾಗಿದ್ದಾರೆ. ಅವರ ಆಶಿರ್ವಾದವೇ ನನಗೆ ಇಂದು ಶ್ರೀ ರಕ್ಷೆಯಾಗಿದೆ. ನಿಮಗೆ ಅಪಘಾತವಾದಾಗ ನಾನು ಹಾಕಿದ ಒಂದೇ ಸಂದೇಶಕ್ಕೆ ಇಂದು ಇಷ್ಟೊಂದು ಜನ ಬಂದು ನನ್ನ ಜೀವದ ಉಸಿರನ್ನು ಉಳಿಸಿದ್ದಾರೆ ಎಂದಾಗ ಅವರ ಕಣ್ಣಂಚಿನಲ್ಲಿ ನೀರು ಧರೆಗೆ ಬಿಳುತ್ತಾ ಇತ್ತು. ಮಗನ ಸಾಮಾಜಿಕ ಕಾರ್ಯಕ್ಕೆ ಮೆಚ್ಚಿ ಹರಸಿದರು

        ~ ಪ್ರವೀಣ ಕಾಗಾಲ. ಕುಮಟಾ.