ಭಾನುವಾರ, ಸೆಪ್ಟೆಂಬರ್ 8, 2019

ನಮ್ಮ ಮನೆ ಗಣೇಶೋತ್ಸವ

ಗಣೇಶ ಹಬ್ಬ ಅಂದ್ರೆ ಎನೋ ಎಲ್ಲಿಲ್ಲದ ಖುಷಿ, ಸಂಭ್ರಮ ..‌ಮನೆಯ ಎಲ್ಲಾ ಬಂಧುಭಾಂಧವರನ್ನು ಒಟ್ಟುಗೂಡಿಸೋ ಹಬ್ಬ ಅಂದ್ರೆ ಇದೊಂದೇ ನಮ್ಮ‌ಮನೆಯಲ್ಲಿ..
ಈ ಸಲದ ಗಣೇಶ ಹಬ್ಬ ಸೆಪ್ಟೆಂಬರ್ 2 ಕ್ಕೆ ಅಂತ ಕ್ಯಾಲೆಂಡರ್ ನೋಡಿದ ಕೂಡಲೇ ಮೊದಲು ಹೊಳೆದಿದ್ದು ಊರಿಗೆ ಹೋಗೋಕೆ‌ ಬಸ್ ಟಿಕೆಟ್ ಬುಕ್ ಮಾಡೋ ವಿಚಾರ. ಕರ್ನಾಟಕ ಸಾರಿಗೆ ನಿಗಮದವರು ಒಂದು ತಿಂಗಳು ಮುಂಚೆ ಮುಂಗಡ ಟಿಕೆಟ್ ಅನ್ನು ತೆರೆಯುತ್ತಾರೆ. ಆ ದಿನಕ್ಕಾಗಿ ಕಾಯೋ ಆತುರ ಕಾತುರ ನನ್ನದಾಯಿತು.
ಅಂತೂ ಕೊನೆಗೆ ಆ ದಿನ ಕೂಡ ಬಂದೇ ಬಿಡ್ತು ರಾತ್ರಿ 12 ಕ್ಕೆ ಟಿಕೆಟ್ ಕಾಯ್ದಿರಿಸುವಿಕೆ ಆರಂಭ ಆಗಬಹುದು ಎಂದು ಚಾತಕ ಪಕ್ಷಿಯಂತೆ ಏದ್ದು ಕೂತು ಅವರ ವೆಬಸೈಟ್ ನೋಡಿದ್ದು ಆಯ್ತು.
ಆದರೆ ಅದು ಓಪನ್ ಆಗಿರಲಿಲ್ಲ.‌ ನಾಳೆ ಆಗಬಹುದು ಎಂದು ಮಲಗಿದ್ದು ಆಯ್ತು. ಆದರೂ ನಾಳೆ ಬೆಳಗ್ಗೆ ಬೇಗ ಎದ್ದು ಟಿಕೆಟ್ ಬುಕ್ ಮಾಡಬೇಕು ಅಂತ ಬೇಗ ಎದ್ದೆ ಕೂಡ. ಸಮಯ 7 ಆಗಿತ್ತು.‌ ಅಷ್ಟರಲ್ಲಿ ನನ್ನ ಸ್ನೇಹಿತನ ಕಾಲ್ ಬಂತು. ಊರಿಗೆ ಹೋಗೋಕೆ‌ ಬಸ್ ಟಿಕೆಟ್ ಓಪನ್‌ ಆಗಿದೆ ಬೇಗ ಮಾಡು ಎಂದು ಹೇಳಿದ. ಅವನ ಕಾಲ್ ಅನ್ನು ಕಡಿತಗೊಳಿಸಿ ಸಾರಿಗೆ ಇಲಾಖೆಯ ವೆಬ್ ಸೈಟ್ ಓಪನ್ ಮಾಡಿ ಅಗಸ್ಟ್ 31 ರ ರಾತ್ರಿ 8 ಗಂಟೆ ರಾಜಹಂಸ ಬಸ್ ಗೆ ಬುಕ್ ಮಾಡಿ ಆಯ್ತು.




 ಇದಾದ ನಂತರ ಮನದಲ್ಲಿ ಎನೋ ಒಂದು ತರಹದ ಸಂತ್ರಪ್ತಿ.  ಒಂದು ದೊಡ್ಡ ಕೆಲಸ ಆಗಿತ್ತು.
ಇದಾದ ಮೇಲೆ ಗಣೇಶನ ಹಬ್ಬದ ದಿನಾಂಕವನ್ನು ಪ್ರತಿ‌ದಿನ ಎಣಿಸೋದೇ ಆಯ್ತು.. ಗಣೇಶನ ಹಬ್ಬಕ್ಕೆ ಅಂತ ಕೆಲವು ವಸ್ತುಗಳನ್ನು ಕೂಡ ಖರೀದಿ ಮಾಡಿದ್ದು ಆಯ್ತು.
ಅಗಸ್ಟ್ 31 ಕ್ಕೆ ರಜೆ ಹಾಕಬೇಕು ಅಂತ ನಿರ್ಧರಿಸಿ ಆಫೀಸ್ ಅಲ್ಲಿ ಹೇಳೋಕೆ‌ ಹೋದ್ರೆ ಆ ದಿನ ಕೆಲಸ ಇರಲ್ಲ ರಜೆ ನಾವೇ ಕೊಡ್ತಿವಿ ಅಂದಾಗ ಖುಷಿ ಬೇರೆ ಜಾಸ್ತಿ ಆಯ್ತು.
ಊರಿಗೆ ಹೋಗುವ ಖುಷಿಯಲ್ಲಿ ಬೇಗ ಬೇಗನೇ ತಯಾರಾಗಿ ಸರಿಯಾಗಿ 4 ಗಂಟೆಗೆ ನಮ್ಮ ರೂಮ್ ಅನ್ನು ಬಿಟ್ಟು ಬಸ್ ನಿಲ್ದಾಣಕ್ಕೆ ಬಂದು ಮೆಜೆಸ್ಟಿಕ್ ಗೆ ಹೋಗೋ ಬಸ್ ಹತ್ತಿ ಕುಳಿತು ಹಾಡು ಕೇಳ್ತಾ ಹೊರಟೆ. ಎಲ್ಲರೂ ಗಣೇಶ ಹಬ್ಬಕ್ಕೆ ಹೋಗ್ತಾ ಇರೋದರಿಂದ ಜಾಸ್ತಿ ಟ್ರಾಫಿಕ್ ಕೂಡ ಇತ್ತು. ಇದನೆಲ್ಲಾ ಗಮನಿಸಿ ನಾನು ಮೊದಲೇ ಹೊರಟಿದ್ದಿರಿಂದ ಯಾವುದೇ ಚಿಂತೆ ಇರಲಿಲ್ಲ.. ಸುಮಾರು 3 ತಾಸುಗಳ ಪ್ರಯಾಣದ ನಂತರ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಬಂದು ಟರ್ಮಿನಲ್ 5 ರ ಹತ್ತಿರ ಬಂದು ನಿಂತೆ. ನನ್ನ ಸ್ನೇಹಿತ ಕೂಡ ಅದೇ ಬಸ್ ಅಲ್ಲಿ ಪ್ರಯಾಣಿಸುತ್ತಿದ್ದರಿಂದ ಅವನಿಗೆ ಎಲ್ಲಿ ಇದ್ದಾನೆ ಅಂತ ಕೇಳೋಕೆ ಕಾಲ್ ಮಾಡಿದೆ‌. ಅವನು ಅಲ್ಲೇ ಪಕ್ಕದಲ್ಲಿದ್ದ ಸ್ವಾತಿ ಹೊಟೆಲ್ ಅಲ್ಲಿ ಊಟ ಮಾಡ್ತಾ ಇದ್ದೀನಿ ಬಾ ಅಂದು ಕರೆದ. ನನಗೂ ಊಟ ಆರ್ಡರ್ ಮಾಡಿ ಆಯ್ತು. ವೆಜ್ ಫ್ರೈಡ್ ರೈಸ್ ಕೂಡ ಬಂತು. ಊಟ ಮಾಡಿ ಅಲ್ಲಿಂದ ವಾಪಸ್ ಕೆಳಗೆ ಬರೋವಷ್ಟರಲ್ಲಿ ನಮ್ಮ ಊರಿಗೆ ಹೋಗುವ ಬಸ್ ಕೂಡ ಬಂದಿತ್ತು. ನಿರ್ವಾಹಕ ನ ಹತ್ತಿರ ಹೋಗಿ ನಮ್ಮ ಟಿಕೆಟ್ ಹಾಗೂ ಗುರುತಿನ ಚೀಟಿ ತೋರಿಸಿ ನಮ್ಮ  ಆಸನವನ್ನು ಅಲಂಕರಿಸಿದ್ದು ಆಯ್ತು. ಸಮಯಕ್ಕೆ ಸರಿಯಾಗಿ ಹೊರಡದಿದ್ದರು ಊರಿಗೆ ಮಾತ್ರ ಸರಿಯಾದ ವೇಳೆಗೆ ತಲುಪಿಸಿದ ಕೀರ್ತಿ ನಮ್ಮ ಸಾರಿಗೆ ಬಸ್ ಚಾಲಕರದ್ದು.
ಅಂತೂ ಬೆಳಗ್ಗೆ 7 ಕ್ಕೆ ಕುಮಟಾ ನಿಲ್ದಾಣ ಇಳಿಯುತ್ತಲೇ‌ ನಮ್ಮನ್ನು ಮೊದಲು ಸ್ವಾಗತಿಸಿದ್ದು ಮಳೆ. ಅಲ್ಲಿಂದ ನಮ್ಮ ಊರಿಗೆ ಹೋಗುವ ಕುಮಟಾ ಅಘನಾಶಿನಿ ಬಸ್ ಹತ್ತಿ ಕುಂತಿದ್ದು ಆಯ್ತು. ಸುಮಾರು 40 ನಿಮಿಷದ ನಂತರ ನಮ್ಮ ಊರಿಗೆ ತಲುಪಿದ ಬಸ್ ಇಳಿದ ತಕ್ಷಣ ಮತ್ತೇ ಜೋರಾದ ಮಳೆ ಶುರು ಆಯ್ತು. ಮಳೆಯಿಂದ ಆಶ್ರಯ ಪಡೆಯಲು ಅಲ್ಲೇ ಇದ್ದ ಒಂದು ಅಂಗಡಿಯಲ್ಲಿ ಸ್ವಲ್ಪ ಹೊತ್ತು ನಿಂತೆ. ಮಳೆ ಕಡಿಮೆ ಆದ ತಕ್ಷಣ ಮನೆ ಕಡೆ ಹೊರಟಿದ್ದು ಆಯ್ತು. ಮೊದಲು ಸ್ವಾಗತಿಸಿದ್ದು ನನ್ನ ತಂಗಿ. ನಂತರ ಮನೆಯವರನ್ನೆಲ್ಲಾ ಮಾತಾಡಿಸಿದ್ದು ಆಯ್ತು.
ಇದಾದ ಮೇಲೆ ಮುಖವನ್ನೆಲ್ಲಾ ತೊಳೆದುಕೊಂಡು ತಿಂಡಿ ತಿಂದುಕೊಂಡು ಕುಳಿತಿರುವಾಗಲೇ ನನ್ನ ಪುಟ್ಟ ತಂಗಿಯ ಕಾಲ್ ಬಂತು . ಎಲ್ಲಿದ್ದಿಯಾ ಅಂತ...!!
ನಾನು ಆಗಲೇ ಮನೆಗೆ ಬಂದು ತಲುಪಿ ಆಗಿದೆ ಬನ್ನಿ ಬೇಗ ಎಂದು ಹೇಳಿ ಕಾಲ್ ಕೂಡ ಕಡಿತಗೊಳಿಸಿದೆ. ಇದಾದ ಸ್ವಲ್ಪ ಹೊತ್ತಿನಲ್ಲಿಯೇ ಅವರು ಕೂಡ ಬಂದ್ರು. ಅವರು ಕೂಡ ಚಹಾ ತಿಂಡಿ ಮಾಡಿದ ಮೇಲೆ ಗಣೇಶನ ಹಬ್ಬಕ್ಕೆ ಅಂತ ಚಕ್ಕುಲಿ, ನವರಿ ಮಾಡಬೇಕು ಅಂತ ಅದಕ್ಕೆ ಸಿದ್ದತೆ ಮಾಡುಕೊಂಡು ಮನೆಯವರೆಲ್ಲಾ ಸೇರಿಕೊಂಡು ಚಕ್ಕುಲಿ, ನವರಿ ಎಲ್ಲಾ ಮಾಡಿ ಅದನ್ನು ಪ್ಯಾಕ್ ಮಾಡಿ ಇಟ್ಟಿದ್ದು ಆಯ್ತು.






ಮಳೆರಾಯ ಕೂಡ ಸ್ವಲ್ಪಕಾಲ ವಿರಾಮ ತೆಗೆದುಕೊಂಡಿದ್ದ ಇದೆಲ್ಲಾ ಆಗೋ ಹೊತ್ತಿಗೆ.. ಮರುದಿನ ಗಣೇಶ ಹಬ್ಬ ಇದ್ದಿದ್ದರಿಂದ ಮಂಟಪದ ಅಲಂಕಾರ ಹಾಗೂ ಗಣೇಶನಿಗೆ ಅಲಂಕಾರ ಮಾಡೋಕೆ ಹೂ ತರಬೇಕು ಅಂತ ರಿಕ್ಷಾ ಮಾಡಿಕೊಂಡು ನಾನು ನನ್ನ ತಮ್ಮ ಹಾಗೇ ನನ್ನ ಇಬ್ಬರು ಬಾವಂದಿರು ಹೊರಟಿದ್ದು ಆಯ್ತು. ಹೂವಿನ ಮಾರ್ಕೆಟ್ ಅಲ್ಲಿ ಗೋಂಡೆ ಹೂ,  ಸೇವಂತಿಗೆ ಹೂ, ಕಾಕಡ ಹೂ ಇದನ್ನು ತಗೊಳ್ಳೋ ಹೊತ್ತಿಗೆ ಮಳೆರಾಯ ಬಂದು ವಕ್ಕರಿಸಿ ಎಲ್ಲರೂ ಕೂಡ ನೆನೆಯುವಂತೆ ಮಾಡಿದ. ಈ ಮಳೆ ಕಡಿಮೆ ಆಗೋದಿಲ್ಲ ಅಂತ ರಿಕ್ಷಾದ ಮೇಲೆ ಹೂ ಅನ್ನು ಹಾಕಿಕೊಂಡು ಮನೆದಾರಿ ಹಿಡಿದೆವು. ಮನೆ ತಲುಪೋ ಹೊತ್ತಿಗೆ ಸಂಜೆ 6:30 ಆಗಿತ್ತು. ನಾವು ಬರೋ ಹೊತ್ತಿಗೆ ಮನೆಯಲ್ಲಿ ಇದ್ದ ಉಳಿದ ಸದಸ್ಯರು ತಳಿರು ತೋರಣ ಹಾಗೂ ಇನ್ನೀತರ ಕೆಲಸಗಳನ್ನು ಮಾಡಿ ಮುಗಿಸಿದ್ದರು. ನಮ್ಮದು ಏನಿದ್ದರೂ ಮಂಟಪದ ಅಲಂಕಾರ ಅಷ್ಟೇ ಆಗಿತ್ತು.




ಇನ್ನೊಂದು ಕಡೆ ಫಲಾವಳಿ ಸಾಮಾನುಗಳನ್ನು ಕಟ್ಟೋ ಕಾರ್ಯಕ್ರಮ ಕೂಡ ನಡೆಯುತ್ತಾ ಇತ್ತು. ನಮ್ಮ ಮಂಟಪ ಮುಗಿಯೋ ಹೊತ್ತಿಗೆ ಊಟ ಕೂಡ ರೆಡಿ ಆಗಿತ್ತು.
ಊಟ ಆದ ಮೇಲೆ ಸ್ವಲ್ಪ ಹರಟೆ ಹೊಡೆದು ಎಲ್ಲರೂ 11 ಗಂಟೆಗೆ ಮಲಗಿದೆವು.
ಬೆಳಗ್ಗೆ 5 ಕ್ಕೆ ಕೆಲವರು ಎದ್ದು ಸ್ನಾನ ಮಾಡಿ ಗಣೇಶ ಹಬ್ಬದ ತಯಾರಿ ಶುರು ಹಚ್ಚಿಕೊಂಡ್ರು. 7 ಗಂಟೆ ಆಗ್ತಾ ಇದ್ದಂತೆ ಅಡಿಗೆ ಮನೆಯಲ್ಲಿ ಮನೆಯವರಿಗೆ ಹಾಗೂ ನಮ್ಮ‌ ಮನೆಗೆ ಬರುವ ಅತಿಥಿಗಳಿಗೆ ಊಟದ ವ್ಯವಸ್ಥೆ ಮಾಡೋಕೆ ಕೆಲಸ ಶುರು ಆಗಿತ್ತು. ನಾನು ಬೇಗ ಎದ್ದು ತರಕಾರಿ ಹೆಚ್ಚಿದ್ದು ಆಯ್ತು. ತರಕಾರಿ ಎಲ್ಲಾ ಹೆಚ್ಚಿ ಮುಗಿಯೋ ಹೊತ್ತಿಗೆ ಬೆಳಗ್ಗಿನ ತಿಂಡಿ ಉಪ್ಪಿಟ್ಟು , ಅವಲಕ್ಕಿ ರೆಡಿ ಆಗಿತ್ತು. ಇದನ್ನೆಲ್ಲಾ ತಿಂದು ಚಿಕ್ಕಪುಟ್ಟ ಕೆಲಸ ಮಾಡೋ ಹೊತ್ತಿಗೆ ಸಮಯ ಸುಮಾರು 10 ಗಂಟೆ .



ನಮ್ಮ ಮನೆಗೆ ಗಣೇಶನನ್ನು ತರೋಕೆ ಸ್ವಲ್ಪ ದೂರದ ಗಜು ಆಚಾರಿ ಅವರ ಮನೆಗೆ ಹೋಗೋಕೆ‌ ನಮ್ಮ ಮನೆಯ ಪುಟ್ಟ ಮಕ್ಕಳು ಜೊತೆಗೆ ನಮ್ಮ ದೊಡ್ಡಪ್ಪ ಸಿದ್ದವಾದರೂ. ರಿಕ್ಷಾಗೆ ಕಾಲ್ ಮಾಡಿ ಅವನು ಕೂಡ ತಾನು ಆಗಲೇ ಬಂದಿದ್ದಿನಿ ಎಂದ.. ಅಲ್ಲಿಂದ ಇವರೆಲ್ಲಾ ತೆರಳಿ ಗಣೇಶನನ್ನು ಕರೆದುಕೊಂಡು ನಮ್ಮ ಮನೆಗೆ ಬಂದರು.‌ ಮೊದಲು ಗಣೇಶನಿಗೆ ಆರತಿ ಬೆಳಗಿ ನಮ್ಮ ದೊಡ್ಡಮ್ಮ ಸ್ವಾಗತ ಮಾಡಿದರು. ಅದಾದ ನಂತರ ನಾವೆಲ್ಲ ಗಣೇಶನನ್ನು ಅಲಂಕೃತವಾದ ಮಂಟಪದಲ್ಲಿ ಕುಳ್ಳಿಸಿದೆವು.





ಇತ್ತ ಅಡಿಗೆ ಮನೆಯಲ್ಲಿ ಹಬ್ಬದೂಟ ತಯಾರಿ ಆಗಿತ್ತು. ಇನ್ನೊಂದು ಕಡೆ ವಿಘ್ನನಿವಾರಕನಿಗೆ ಇಷ್ಟವಾದ ಮೊದಕ, ಪಂಚಕಜ್ಜಾಯ, ಚಕ್ಕುಲಿ, ವಡೆ, ಕಡಬು, ಪುರಿ ಇನ್ನೀತರ ತಿಂಡಿ ತಿನಿಸುಗಳು ಕೂಡ ರೆಡಿ ಆದ್ವು.
ಸುಮಾರು 2 ಗಂಟೆಯ ನಂತರ ಪೂಜೆ ತಯಾರಿ ಶುರು ಆಗಿ ಮುಗಿಯೋ ಹೊತ್ತಿಗೆ ಸುಮಾರು ನಾಲ್ಕು ಗಂಟೆ ಆಯ್ತು.
ಈ ಸಲದ ನಮ್ಮ ಗಣೇಶನಿಗೆ ವಿಶೇಷ ಅಂದ್ರೆ ಬೆಳ್ಳಿ ಕೀರಿಟ ತೊಡಿಸಿದ್ದು. ನಮ್ಮ ಬಾವ ಹೊತ್ತಿಕೊಂಡಿದ್ದ ಹರಕೆ ತೀರಿಸಲು ಇದನ್ನು ಈ ಸಲ ಅರ್ಪಣೆ ಮಾಡಿದರು.




ಜೊತೆಗೆ ಸಾನ್ವಿ ಹೆಸರಿನಲ್ಲಿ ಎರಡು ಸುಂದರ ಬೆಳ್ಳಿ ದೀಪಗಳನ್ನು ಕೂಡ ವಿಘ್ನನಿವಾರಕನಿಗೆ ಸಮರ್ಪಿಸಲಾಯಿತು. ಪೂಜೆ ಮುಗಿದು ಎಲ್ಲರಿಗೂ ಪ್ರಸಾದ ಹಂಚಿ ಬಂದವರಿಗೆಲ್ಲಾ ಊಟಕ್ಕೆ  ಬಡಿಸಿ ನಾವು ಊಟ ಮಾಡೋ ಹೊತ್ತಿಗೆ ಸಮಯ 5:30 ದಾಟಿತ್ತು.  ಈ ಸಲ ನಮ್ಮ ಮನೆಗೆ ತುಂಬಾ ಜನ ಗಣೇಶನನ್ನು ನೋಡಲು ಆಗಮಿಸಿದ್ದು ತುಂಬಾನೇ ಖುಷಿ ನೀಡಿತು. ಊಟವೆಲ್ಲಾ ಮುಗಿದ ಮೇಲೆ ಸ್ವಲ್ಪ ಹೊತ್ತು ಬಂದವರ ಹತ್ತಿರ ಮಾತು ಹೊರಡುವವರಿಗೆ ಪ್ರಸಾದ ಕೊಟ್ಟು ಅವರನ್ನು ಬಿಳ್ಕೊಟ್ಟಿದ್ದು ಆಯ್ತು.
ಸಂಜೆ 7 ಆಗುತ್ತಿದ್ದಂತೆ ರಾತ್ರಿಯ ಪೂಜೆಗೆ ತಯಾರಿ ಶುರು ಆಗಿತ್ತು. ಒಂದೇ ದಿನ ಗಣೇಶ ಹಬ್ಬ ಆಗಿದ್ದರಿಂದ ಸ್ವಲ್ಪ ಗಡಿಬಿಡಿಯಲ್ಲಿಯೇ ತಯಾರಿ ಮಾಡಬೇಕು ಅಂತ ಹೇಳೋ ಹೊತ್ತಿಗೆ ವಿರಾಮ ನೀಡಿದ್ದ ಮಳೆರಾಯ ಮತ್ತೇ ಪ್ರತ್ಯಕ್ಷವಾದ  ಇವನ ಆಗಮನ ಆಗುತ್ತಿದ್ದಂತೆ ವಿದ್ಯುತ್ ಕೂಡ ಹೋಯ್ತು.
ವಿದ್ಯುತ್ ಆಗ ಬರುತ್ತೇ ಈಗ ಬರುತ್ತೇ ಅಂತ ಕಾಯೋದೇ ಆಯ್ತು ಅದು ಕೂಡ ಕಣ್ಣಾಮುಚ್ಚಾಲೆ ಆಟ ಆಡ್ತಾ ಇತ್ತು. ಕೊನೆಗೂ ಇದೂ ವಿದ್ಯುತ್ ಬರಲ್ಲ ಅಂತ ತೀರ್ಮಾನ ಮಾಡಿ ಪೂಜೆ ಕೂಡ ಆರಂಭಿಸಿದೆವು. ಪೂಜೆ ಆರಂಭವಾದ ಸ್ವಲ್ಪ ಹೊತ್ತಿ ನಲ್ಲಿಯೇ ವಿದ್ಯುತ್ ಕೂಡ ಬಂತು.




ಪೂಜೆ ಮುಗಿದು ಎಲ್ಲರಿಗೂ ಪ್ರಸಾದ ಕೂಡ ಹಂಚಿದ ಮೇಲೆ ಸಾಂಪ್ರದಾಯಿಕ ಪೂ ಕುಣಿತ ಸೇವೆಯನ್ನು ನಮ್ಮ ಅಣ್ಣತಮ್ಮಂದಿರು ಮಾಡಿದ್ರು. ಇದಾದ ಮೇಲೆ ಅರ್ಚಕರ ಅಣತಿಯಂತೆ ವಿಸರ್ಜನಾ ಪೂಜೆ ಮಾಡಿ ಗಣೇಶನನ್ನು ಅಲಂಕೃತ ಮಂಟಪದಿಂದ ನಮ್ಮ ತುಳಸಿ ಕಟ್ಟೆಯ ಮುಂದೆ ತಂದು ಇಟ್ಟೆವು.




ಅಲ್ಲಿ ಮನೆಯವರೆಲ್ಲಾ ಅರಿಶಿನಿ ಕುಂಕುಮ ಜೊತೆಗೆ ಹೊದ್ದಲನ್ನು ಹಾಕಿ ವಿಘ್ನನಿವಾರಕನಿಗೆ ಈ ವರ್ಷ ನಮ್ಮ ಮನೆಯಿಂದ ಬಿಳ್ಕೊಡುಗೆ ಕಾರ್ಯಕ್ರಮಕ್ಕೆ ಅಡಿಯಿಟ್ಟೆವು.




 ಸ್ವಲ್ಪ ಬರುತ್ತಿದ್ದ ಮಳೆಯಲ್ಲಿಯೇ ಗಣೇಶನನ್ನು ಹೊತ್ತುಕೊಂಡು ನಮ್ಮ ಮನೆ ಪಕ್ಕಾನೇ ಇರುವ ಲೋಕೇಶ್ವರ ದೇವಾಲಯದ ಬಳಿ ಇರುವ ಕೆರೆ ಹತ್ತಿರ ಬಂದು ವಿಸರ್ಜನೆ ಕೂಡ ಮಾಡಿ ಮುಂದಿನ ವರ್ಷ ಮತ್ತೇ ಬಾ ಅಂತ ಘೋಷಣೆ ಹಾಕಿದೆವು. ಅಲ್ಲಿಂದ ವಾಪಸ್ ಮನೆಗೆ ಬಂದು ಮತ್ತೇ ರಾತ್ರಿ ಊಟಕ್ಕೆ ವ್ಯವಸ್ಥೆ ಮಾಡಿದ್ದು ಆಯ್ತು. ಎಲ್ಲರದೂ ಊಟ ಆದ ಮೇಲೆ ಸ್ವಲ್ಪ ಹೊತ್ತು ಎಲ್ಲರೂ ತಮಾಷೆ ಮಾಡಿಕೊಂಡು ನಕ್ಕಿದ್ದು ಆಯ್ತು...
ಕೊನೆಗೂ ನಮ್ಮ ಮನೆಯಲ್ಲಿ 31ನೇ ವರ್ಷದ ಗಣೇಶೋತ್ಸವಕ್ಕೆ ಒಂದು ಅಭೂತಪೂರ್ವ ವಿದಾಯ ಸಿಕ್ಕಿತು. ಮಳೆಯ ಆಟದ ನಡುವೆಯು ಈ ವರ್ಷ ಮನೆಯವರೆಲ್ಲಾ ಜೊತೆ ಸಂಭ್ರಮ ಸಡಗರಗಳಿಂದ ಗಣೇಶ ಹಬ್ಬವನ್ನು ಆಚರಿಸಿದ್ದು ಅಪಾರವಾದ ಖುಷಿ ನೀಡಿದ್ದರಲ್ಲಿ ಯಾವುದೇ ಸಂದೇಹವಿಲ್ಲ.. ಮತ್ತೇ ಆ ತರಹದ ಕ್ಷಣ ಆದಷ್ಟೂ ಬೇಗನೇ ಬರಲಿ ಎಂಬ ಆಸೆಯೊಂದಿಗೆ..
ಜೈ ಗಣೇಶ..




ಪಶ್ಚಾತಾಪ



ಅದು ಜಿಲ್ಲೆಯ ಪ್ರತಿಷ್ಠಿತ ಕಾಲೇಜು. ಆ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಆ ಊರಿನ ಆಗರ್ಭ ಶ್ರೀಮಂತರಾದ ಗೋವಿಂದರಾಯರು ವಹಿಸಿಕೊಂಡಿದ್ದರು. ಇವರು ಶ್ರೀಮಂತರಾದರು ತುಂಬಾ ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದರು. ಇವರ ಒಬ್ಬನೇ ಮಗನ ಹೆಸರು ರಾಜೀವ. ಇವನೋ ತನ್ನ ತಂದೆಯ ನಡುವಳಿಕೆಗೆ ವಿರುದ್ಧವಾಗಿದ್ದವನು. ತನ್ನ ಶ್ರೀಮಂತಿಕೆಯ ದರ್ಪ ಇವನಲ್ಲಿ  ಅತಿಯಾಗಿ ತುಂಬಿಕೊಂಡಿತ್ತು. ಇವನು ಕೂಡ ಅದೇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುತ್ತಾನೆ.
ಅದೇ ಕಾಲೇಜಿನಲ್ಲಿ ಮಧ್ಯಮ ವರ್ಗದ ಕುಟುಂಬದಿಂದ ಬಂದಂತಹ ನಳಿನಿಯು ಕೂಡ ಓದುತ್ತಿರುತ್ತಾಳೆ. ಅವಳು ಓದಿನಲ್ಲಿ ತುಂಬಾ ಜಾಣೆ ಹಾಗೇ ನೋಡಲು ಕೂಡ ಸ್ಪುರದ್ರೂಪಿ ಆಗಿದ್ದಳು. ಇವಳ ಈ ಸೌಂದರ್ಯವನ್ನು ಕಂಡು ಅನೇಕ ಜನರು ಪ್ರೀತಿಸಲು ಹೋಗಿ ನಿರಾಶರಾಗಿದ್ದರು. ಹೀಗೆ ಒಂದು ದಿನ ರಾಜೀವನು ಕೂಡ ಇವಳನ್ನು ನೋಡಿ ತುಂಬಾ ಆಕರ್ಷಿತನಾಗುತ್ತಾನೆ‌. ಇವಳನ್ನು ಹೇಗಾದರು ಮಾಡಿ ತನ್ನ ಬಲೆಗೆ ಹಾಕಿಕೊಳ್ಳಬೇಕೆಂದು ನಿರ್ಧರಿಸಿ ಮೊದಲು ಅವಳಿಗೆ ತನ್ನ ಸ್ನೇಹದ ಹಸ್ತವನ್ನು ಚಾಚುತ್ತಾನೆ. ಒಳ್ಳೆಯ ಅಸಾಮಿಯಂತೆ ಸೋಗು ಹಾಕಿ ಅವಳ ಗೆಳೆತನವನ್ನು ಕೂಡ ಪಡೆಯುವಲ್ಲಿ ಯಶಸ್ವಿಯಾಗುತ್ತಾನೆ.  ಇತ್ತ ನಳಿನಿಯು ಕೂಡ ಇವನ ಒಳ್ಳೆತನದ ನಾಟಕವನ್ನು ನಂಬಿ ತನ್ನ ಜೀವನದ ಕಷ್ಟ ಸುಖಗಳನ್ನೆಲ್ಲಾ ಹಂಚಿಕೊಳ್ಳುತ್ತಾಳೆ.
ಇದೂ ಅನೇಕ ದಿನಗಳವರೆಗೆ ಮುಂದುವರೆಯುತ್ತದೆ..
ಒಂದು ದಿನ ರಾಜೀವನು ನಳಿನಿಯ ಹತ್ತಿರ ಬಂದು ತನ್ನ ಪ್ರೀತಿಯ ವಿಷಯವನ್ನು ಪ್ರಸ್ತಾಪ ಮಾಡುತ್ತಾನೆ. ಮೊದಮೊದಲು ಒಪ್ಪದ ನಳಿನಿಯು ಕೊನೆಗೆ ಇವನ ಒಳ್ಳೆತನದ ಮರಳು ಮಾತಿಗೆ ಬಿದ್ದು ಪ್ರೀತಿ ಮಾಡಲು ಪ್ರಾರಂಭಿಸುತ್ತಾಳೆ..!
ಮೊದಲೇ ಹೆಣ್ಣಿನ ಬಗ್ಗೆ ಅತಿಯಾದ ಚಪಲ ಚೆನ್ನಿಗನಾಗಿರುವ ವಿಷಯ ನಳಿನಿಗೆ ಗೊತ್ತೇ ಇರುವುದಿಲ್ಲ.
ಹೀಗೆ ಪ್ರೀತಿಯನ್ನು ಮಾಡುತ್ತ ಅನೇಕ ದಿನಗಳವರೆಗೆ ಒಬ್ಬರನ್ನೊಬ್ಬರು ಪ್ರೇಮಲೋಕದಲ್ಲಿ ವಿಹರಿಸುತ್ತಾ ಇರುತ್ತಾರೆ.
ಹೀಗಿರುವಾಗ ಒಂದು ದಿನ ಇವರಿಬ್ಬರೂ ನಂದಿಬೆಟ್ಟಕ್ಕೆ ಪ್ರವಾಸಕ್ಕೆ ಹೋಗಬೇಕೆಂದು ನಿರ್ಧರಿಸಿ ತೆರಳುತ್ತಾರೆ.  ಅಲ್ಲಿ ಇಲ್ಲಿ ಸುತ್ತಾಡಿ ಒಂದು ಕಡೆ ಕುಳಿತು ಮಾತನಾಡುತ್ತಿರುವಾಗ ರಾಜೀವನ ಮಾತು ಕೇಳಿ ನಳಿನಿಯು ಒಮ್ಮೆಲೆ ದಿಗಿಲುಬಡಿದಂತೆ ಕುಳಿತುಕೊಳ್ಳುತ್ತಾಳೆ. ಆಗ ಅವಳಿಗೆ ಅರಿವಾಗುತ್ತದೆ. ರಾಜೀವನಿಗೆ ಬೇಕಾಗಿದ್ದು ತನ್ನ ನಿಷ್ಕಲ್ಮಶ ಪ್ರೀತಿಯಲ್ಲ.. ಕೇವಲ ದೈಹಿಕ ಸುಖವೆಂದು.. ಇದನ್ನು ತಿಳಿದು ಅವನಿಗೆ ಅಲ್ಲಿಯೇ ಛೀಮಾರಿ ಹಾಕುತ್ತಾಳೆ.‌ ಇದರಿಂದ ಕೋಪಿತನಾದ ರಾಜೀವನು ಅವಳನ್ನು ಹೊಡೆದು ಹೇಗಾದರೂ ಇವಳಿಂದ ದೈಹಿಕ ಸುಖ ಪಡೆಯಬೇಕೆಂದು ಪ್ರಯತ್ನ ಪಡುತ್ತಾನೆ. ಇತ್ತ ನಳಿನಿಯು  ಅವನ ಕಪಿಮುಷ್ಠಿಯಿಂದ ಅಲ್ಲಿದ್ದ ಕೆಲ ಪ್ರವಾಸಿಗರ ಸಹಾಯದಿಂದ ಪಾರಾಗುತ್ತಾಳೆ. ಅಲ್ಲಿದ್ದ ಪ್ರವಾಸಿಗರು ಅವನನ್ನು ಚೆನ್ನಾಗಿ ತಳಿಸುತ್ತಾರೆ. ಹಾಗೇ ಅಲ್ಲಿಂದ ಪಾರಾದ ನಳಿನಿಯು ಆ ಊರನ್ನು ಬಿಟ್ಟು ಬೇರೆ ಊರಿಗೆ ಹೋಗಿ ನೆಲೆಸುತ್ತಾಳೆ. ಕಾಲೇಜು ಕೂಡ ಮುಗಿದಿರುತ್ತದೆ.
ಇತ್ತ ಗೋವಿಂದರಾಯರು ಮಗನ ಕಾಲೇಜು ವ್ಯಾಸಂಗ ಮುಗಿಯುತ್ತಿದ್ದಂತೆ ಮದುವೆ ಮಾಡಲು ನಿರ್ಧರಿಸುತ್ತಾರೆ. ಆದರೆ ರಾಜೀವನ ಸರಸ ಸಲ್ಲಾಪದ ವಿಷ್ಯ ಇಡೀ ಊರಿಗೆ ಗೊತ್ತಿದ್ದರಿಂದ ರಾಜೀವನಿಗೆ ಯಾರೂ ಕೂಡ ಹೆಣ್ಣು ಕೊಡಲು ಮುಂದೆ ಬರುವುದಿಲ್ಲ. ಇದರಿಂದ ಗೋವಿಂದರಾಯರು ತುಂಬಾ ಚಿಂತಾಕ್ರಾಂತರಾಗುತ್ತಾರೆ. ತನ್ನ ಮಗ ಮಾಡಿದ ತಪ್ಪಿನಿಂದ ತನ್ನ ಮನೆಯ ಮಾನ ಮರ್ಯಾದೆ ಎಲ್ಲಾ ಹಾಳಾಯಿತು ಎಂದೂ ದುಃಖ ಪಡುತ್ತಾರೆ. ಆ ಊರಿನಲ್ಲಿ ತನಗೆ ಇದ್ದ ಅಪಾರವಾದ ಗೌರವಕ್ಕೆ ಕಪ್ಪುಚುಕ್ಕೆ ಬಂತು ಎಂಬ ಕೊರಗಿನಲ್ಲಿಯೇ ಅವರು ತಮ್ಮ ಪ್ರಾಣವನ್ನು ಬೀಡುತ್ತಾರೆ.
ತನ್ನ ತಂದೆಯ ಸಾವಿನಿಂದ ರಾಜೀವನು ಕುಗ್ಗಿಹೋಗುತ್ತಾನೆ. ತಾನು ಅಂದು ಮಾಡಿದ ತಪ್ಪನ್ನು ನೆನೆದು ಪಶ್ಚಾತ್ತಾಪ ಪಡುತ್ತಾನೆ. ತನ್ನಿಂದ ತನ್ನ ಮನೆತನಕ್ಕೆ ಇದ್ದ ಗೌರವವೆಲ್ಲಾ ಹಾಳಾಯಿತು ಎಂದೂ ಮರುಕಪಟ್ಟು ಇನ್ನೂ ಮುಂದೆ ಆದರೂ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಬಾಳಿ ತನ್ನ ತಂದೆಯ ಹೆಸರನ್ನು ಬೆಳಗಬೇಕೆಂದು ನಿರ್ಧರಿಸಿ ತನ್ನ ತಂದೆ ನಡೆಸುತ್ತಿದ್ದ ಕಾಲೇಜನ್ನು ಅತ್ಯಂತ ಉತ್ತಮ ರೀತಿಯಲ್ಲಿ ನಡೆಸಿಕೊಂಡು ಹೋಗುತ್ತಾನೆ.  ಇದಾಗಿ ಮೂರು ನಾಲ್ಕು ವರ್ಷಗಳೇ ಕಳೆಯುತ್ತದೆ.‌
ಇತ್ತ ನಳಿನಿಯು ಚೆನ್ನಾಗಿ ಓದಿ ಪಾಸಾಗಿ ತಾನು ಕಲಿತಿದ್ದ ಕಾಲೇಜಿಗೆ ಉಪನ್ಯಾಸಕಿಯಾಗಿ ಬರುತ್ತಾಳೆ. ಕಾಲೇಜಿನ ಪ್ರಾಂಗಣದಲ್ಲಿ ನಳಿನಿಯನ್ನು ಕಂಡ ಕೂಡಲೇ ಒಮ್ಮೇಲೆ ಆಶ್ಚರ್ಯ ಹಾಗೂ ಹೇಳತೀರದ ಸಂತಸ ಉಂಟಾಗುತ್ತದೆ. ಇದಾದ ಮರು ಘಳಿಗೆಯಲ್ಲಿ ಅವನಿಗೆ ನಳಿನಿಯ ಮಾತು ಕೇಳಿ ತುಂಬಾ ನಿರಾಶೆಯಾಗುತ್ತದೆ.
ನಳಿನಿಯನ್ನು ಈಗಲಾದರೂ ಒಪ್ಪಿಸಿ ಮದುವೆಯಾಗಬಹುದು  ಎಂದೂ‌ ಮನಸ್ಸಿನಲ್ಲಿಯೇ ಅಂದುಕೊಂಡಿದ್ದ ರಾಜೀವನಿಗೆ ನಳಿನಿಯು ತನಗೇ ಈಗಾಗಲೇ ಮದುವೆಯಾಗಿದೆ ಎಂಬ ವಿಷ್ಯ ಹೇಳುತ್ತಲೇ ಒಂದು ಕ್ಷಣ ಕುಸಿದು ಬೀಳುವ ಸ್ಥಿತಿಗೆ ತಲುಪುತ್ತಾನೆ‌.
ಅಂದು ನಳಿನಿಯಂತ ಒಳ್ಳೆಯ ಹುಡುಗಿಗೆ ತನ್ನ ಆತುರದ ತಪ್ಪಿನಿಂದಾಗಿ ಕೆಟ್ಟ ದಾರಿಯಲ್ಲಿ ಸಾಗಿದ್ದ ನನಗೆ ಇದು ಆಗಬೇಕಾಗಿದ್ದದ್ದೇ ಎಂದೂ ಕಣ್ಣಂಚಿನಿಂದ ನೀರನ್ನು ಸುರಿಸುತ್ತ ಪಶ್ಚಾತ್ತಾಪ ಪಡುತ್ತಾ ತನ್ನ ಕೊನೆ ಉಸಿರಿನ ತನಕ ನಳಿನಿಯ ನೆನಪಲ್ಲೇ ತನ್ನ ಇಡೀ ಜೀವನವನ್ನೂ ಮದುವೆಯಾಗದೇ ಕಾಲ ಕಳೆಯುತ್ತಾನೆ.

ಪ್ರವೀಣ ಕಾಗಾಲ.

ಸೋಮವಾರ, ಆಗಸ್ಟ್ 5, 2019

ಸ್ನೇಹಲೋಕ 10ನೇ ವಾರ್ಷಿಕೋತ್ಸವ

ಸ್ನೇಹ ಅದು ಅಮರ, ಸ್ನೇಹ ಅದು ಚಿರನೂತನ, ಅಮೃತವಾಹಿನಿಯೊಂದು ಹರಿಯುತ್ತಿದೆ ಮಾನವನ ಎದೆಯಿಂದ ಎದೆಗೆ ಸತತ..!!
ಆತ್ಮೀಯ ಗೆಳೆತನಕ್ಕೊಂದು ಪ್ರೀತಿಯ ನಮನ ಎಂದೂ ನೋಡಿರದ ವ್ಯಕ್ತಿಗಳೊಂದಿಗೆ ಸಹಜತೆಯಲ್ಲಿ ಮೂಡುವುದೇ ಸ್ನೇಹ. ಆತ್ಮೀಯವಾದ ನುಡಿಗಳೊಂದಿಗೇ ಎಂದೂ ಕಂಡರಿಯದ ಪ್ರೀತಿ, ವಿಶ್ವಾಸ, ಭಾಂದವ್ಯ, ಬೆಸುಗೆ ಇವೆಲ್ಲವೂಗಳನ್ನೂ ನೀಡುವುದು ಈ ಸ್ನೇಹ ಒಂದೇ...!!!
ಸ್ನೇಹಲೋಕ ಹೆಸರೇ ಹೇಳುವಂತೆ ಇದೊಂದು ಸ್ನೇಹಿತರ ಬಳಗ. 




ಹತ್ತು ವರ್ಷಗಳ ಹಿಂದೆ ಆರ್ಕುಟ್ ಇಂದ ಆರಂಭವಾಗಿ ಇಂದು ಫೇಸಬುಕ್, ವಾಟ್ಸಪ್ ಹಾಗೂ ಇನ್ನಿತರ ಸಾಮಾಜಿಕ ಜಾಲತಾಣಗಳ ಮೂಲಕ ಏಳು ಜನರಿಂದ ಆರಂಭವಾದ ಈ ಬಳಗ ಇಂದೂ ನೂರಾರು ಜನರ  ಸ್ನೇಹಿತರನ್ನು ಒಟ್ಟುಗೂಡಿಸಿಕೊಂಡು ಈ ಸಮಾಜದಲ್ಲಿ ತನ್ನದೇ ಆದ ಹೆಸರನ್ನು ಉಳಿಸಿಕೊಂಡಿದೆ. ಹಾಗೇ ಸ್ನೇಹಲೋಕ ಬಳಗ ಸ್ಥಾಪನೆ ಆದ ದಿನವನ್ನು ಆಶ್ರಮಗಳು & ಸರಕಾರಿ ಶಾಲೆಗಳ ಅವಶ್ಯಕ ಬೇಡಿಕೆಗಳನ್ನು ಈಡೇರಿಸುತ್ತ ತನ್ನ ವಾರ್ಷಿಕೊತ್ಸವವನ್ನು ಒಂದು ಅರ್ಥಪೂರ್ಣ ಕಾರ್ಯಕ್ರಮ ಮಾಡುವುದರ ಮೂಲಕ ಇಂದಿನ ತನಕ ಅಚರಣೆ ಮಾಡುತ್ತ ಬಂದಿದೆ. ಇಂದೂ ಈ ಸ್ನೇಹಲೋಕ ಆರಂಭವಾಗಿ ಹತ್ತು ವರ್ಷಗಳು. ಈ ದಶಕದ ಸಂಭ್ರಮವನ್ನು ವಿಶಿಷ್ಟವಾಗಿ ಆಚರಣೆ ಮಾಡಬೇಕು ಎಂಬ ಕನಸನ್ನು ಹೊತ್ತು ಸತತ ಮೂರು ತಿಂಗಳ ಅವಿರತ ಪರಿಶ್ರಮದಿಂದ ಬೆಂಗಳೂರಿನ ವಿವಿಧ ಏರಿಯಾದ ಒಟ್ಟು ಹತ್ತು ಆಶ್ರಮಗಳ ಮಕ್ಕಳಿಗೆ ನೃತ್ಯ ಸ್ಪರ್ಧೆ ಕಾರ್ಯಕ್ರಮವನ್ನು ಹಮ್ಮಿಕೊಂಡು ಇಂದೂ ಅದರ ಯಶಸ್ಸಿನ ಖುಷಿಯಲ್ಲಿ ನಮ್ಮ ಎಲ್ಲಾ ಸ್ನೇಹಿತರು ಇದ್ದಾರೆ.
ಆಶ್ರಮದ ಮಕ್ಕಳ ಪ್ರತಿಭೆಗಳನ್ನು ಹೊರತರುವ ಒಂದು ವಿಭಿನ್ನ ಪ್ರಯತ್ನವೇ ಈ ಲಿಟ್ಲ್ ಚಾಂಪ್ಸ್ - 2019. 




ಬೆಂಗಳೂರಿನ ನಯನ ಸಭಾಂಗಣದಲ್ಲಿ ಹಮ್ಮಿಕೊಂಡ ಈ ಕಾರ್ಯಕ್ರಮಕ್ಕೆ ಒಟ್ಟು ಹತ್ತು ಆಶ್ರಮಗಳಿಂದ ಬರೋಬ್ಬರಿ 189 ಮಕ್ಕಳು ಭಾಗವಹಿಸಿದ್ದರು. ಒಂದೇ ವೇದಿಕೆಯ ಮೇಲೆ ಇವರೆಲ್ಲರೂ ತಮ್ಮಲ್ಲಿರುವ ಕಲೆಯನ್ನು ವೇದಿಕೆಯ ಮೇಲೆ ತೋರಿಸಿ ನೆರೆದ ಜನರ ಪಾಲಿಗೆ ಒಂದು ಒಳ್ಳೆಯ ಮನೋರಂಜನೆಯನ್ನು ಕೊಟ್ಟು ಸ್ನೇಹಲೋಕದ ವಾರ್ಷಿಕೋತ್ಸವ ದ ದಿನವನ್ನು ಸ್ಮರಣೀಯವಾಗಿ ಮಾಡಿರುವುದು ಖುಷಿಯ ವಿಚಾರ.  ಹತ್ತು ನೃತ್ಯಗಳು ವಿವಿಧ ಬಗೆಯ ಕಲೆ, ಸಂಸ್ಕೃತಿಯ ಅನಾವರಣ ಆಗಿದ್ದು ನಿಜಕ್ಕೂ ಹೆಮ್ಮೆಯ ಸಂಗತಿ. ಕಾರ್ಯಕ್ರಮದ ಆರಂಭದಲ್ಲಿ ಸ್ವಾಗತ ಭಾಷಣವನ್ನು ಶ್ರೀಮತಿ ಅನುಪಮಾ ಗೌಡ ಅವರು ಮಾಡಿದರು. ಕಾರ್ಯಕ್ರಮದ ವಾಡಿಕೆಯಂತೆ ಪ್ರಾರ್ಥನೆಯನ್ನು ನಮ್ಮ ಸ್ನೇಹಲೋಕ ಬಳಗದ ಮಹಿಳಾ ಸದಸ್ಯರುಗಳು ನೆರವೇರಿಸಿಕೊಟ್ಟರು. ನಂತರ ಕಾರ್ಯಕ್ರಮದ ಉದ್ಘಾಟನೆಯನ್ನು ಸ್ನೇಹಲೋಕ ಬಳಗಕ್ಕೆ ಸದಾ ಬೆಂಬಲ ನೀಡುತ್ತ ಬಂದಿರುವ ಮತ್ಸ್ಯ ವಿಜ್ಞಾನಿ, ಕವಿಯು ಕೂಡ  ಆಗಿರುವ ಶ್ರೀ ಆಜಾದ್ ಐ ಎಸ್, ನಮ್ಮೆಲ್ಲರ ಅಚ್ಚುಮೆಚ್ಚಿನ ಅಕ್ಕ 3ಕೆ ಬಳಗದ ಮೂಲಕ ಕನ್ನಡ ಸಾಹಿತ್ಯದ ಬೆಳವಣಿಗೆಗೆ ನೆರವಾಗುವ ಮೂಲಕ ಒಂದು ಪುಟ್ಟ ಹೆಜ್ಜೆಯನ್ನು ಇಟ್ಟು ಅದರಲ್ಲಿ ಯಶಸ್ಸು ಕೂಡ ಸಾಧಿಸಿರುವ ಶ್ರೀಮತಿ ರೂಪಾ ಸತೀಶ್ , ಖ್ಯಾತ ಗಾಯಕಿ ಆಗಿರುವ ಶ್ರೀಮತಿ ಅಂಜಲಿ ಹಳಿಯಾಳ್ , ನಮ್ಮ ಸ್ನೇಹಲೋಕ ಬಳಗದ ಅಧ್ಯಕ್ಷರೆಂದೆ ಹೆಸರುವಾಸಿಯಾದ ಸುಮನಾ ಕತ್ತಿ, ನಮ್ಮ ಬಳಗದ ಸದಸ್ಯರು ಆಗಿರುವ ಶ್ರೀ ರಮೇಶ್ ಅವರು  ನಡೆಸಿಕೊಟ್ಟರು. ಬಳಗದ ಸದಸ್ಯರಾದ ಶ್ರೀ ವಸಂತ್ ಅವರು ಸ್ನೇಹಲೋಕ ನಡೆದು ಬಂದ ದಾರಿಯನ್ನು ಸಂಕ್ಷಿಪ್ತವಾಗಿ ತಿಳಿಸಿದರು. ನಂತರ ಸ್ನೇಹಲೋಕದ ಬಗ್ಗೆ ತಮ್ಮ ಮನದಾಳದ ಮಾತುಗಳನ್ನು ಶ್ರೀ ರಮೇಶ್ ಅವರು ಹಂಚಿಕೊಂಡರು. ತದನಂತರ ಅತಿಥಿಗಳಾಗಿ ಆಗಮಿಸಿದವರು ತಮ್ಮ ಭಾಷಣದ ಮೂಲಕ ಸ್ನೇಹಲೋಕ ವಾರ್ಷಿಕೋತ್ಸವದ ಈ ಕಾರ್ಯಕ್ರಮಕ್ಕೆ ಶುಭ ಕೋರಿದರು. ಆಧ್ಯಕ್ಷೀಯ ಭಾಷಣವನ್ನು ಸುಮನಾ ಕತ್ತಿ ಅವರು ಮಾಡಿದರು. 



ಹತ್ತನೇ ವರ್ಷದ ಸಂಭ್ರಮದ ನೆನಪಿಗಾಗಿ "ಶ್ರಮಜೀವಿ ಪುರಸ್ಕಾರ" ಅನ್ನು ಸ್ವಾವಲಂಬಿ ಟ್ರಸ್ಟ್ ನ ಅಂಧ ಗಾಯಕರಾದ ಗೋಪಿ ಅವರಿಗೆ ನೀಡುವುದರ ಮೂಲಕ ಸನ್ಮಾನಿಸಲಾಯಿತು. ಯಾರಿಗೂ ಭಾರವಾಗದೇ ಸ್ವಾವಲಂಬಿ ಜೀವನ ನಡೆಸುತ್ತಿರುವ ಈ ಅಂಧ ಗಾಯಕರು ತಮ್ಮ ಹಾಡಿನ ಮೂಲಕ ನೆರೆದ ನಮ್ಮೆಲ್ಲರನ್ನು ರಂಜಿಸಿದರು. ವೇದಿಕೆ ಕಾರ್ಯಕ್ರಮ ಮುಗಿದ ಮೇಲೆ
ಆಶ್ರಮದ ಮಕ್ಕಳಿಗೆ ನೃತ್ಯ ಸ್ಪರ್ಧೆ ಆರಂಭ ಮಾಡಲು ಸಿದ್ಧತೆ ಮಾಡಿಕೊಳ್ಳೋ ಹೊತ್ತಿಗೆ ವೇದಿಕೆಯಲ್ಲಿ ಎಲ್ಲರಿಗೂ ಅಚ್ಚರಿ ನೀಡಿದ ಬಳಗದ ಸದಸ್ಯರಾದ ಸಂದೀಪ್ ( ಪಿಪಿ ) , ಕಿರಣ್, ಭುವನ್ ಅವರು ತಮ್ಮ ತಂಡದ ಮೂಲಕ ನೃತ್ಯ ಮಾಡುವುದರ ಮೂಲಕ ನಮ್ಮೆಲ್ಲ ಸ್ನೇಹಿತರಿಗೆ ಭರಪೂರ ಮನರಂಜನೆಯನ್ನೇ ಕೊಟ್ಟರು. 



ಇದಾದ ನಂತರ ಆರಂಭ ಆಗಿದ್ದೆ ಆಶ್ರಮದ ಮಕ್ಕಳಿಗೆ ನೃತ್ಯ ಸ್ಪರ್ಧೆ. ಒಂದೊಂದು ವಿಭಿನ್ನ, ವಿಶಿಷ್ಟವಾದ ಕಲೆ, ಸಂಸ್ಕೃತಿಯ ಅನಾವರಣ ...!!!
ಕಿಕ್ಕಿರಿದು ನೆರೆದ ಮಂದಿಗೆ ತಮ್ಮ ಪ್ರತಿಭೆಯ ಮೂಲಕ ರಂಜಿಸಿದ 189 ಮಕ್ಕಳು ನಿಜಕ್ಕೂ ವೇದಿಕೆಗೆ ಸಂಪೂರ್ಣವಾದ ನ್ಯಾಯ ಒದಗಿಸಿದರು. ನಮ್ಮ ಮೂರು ತಿಂಗಳ ಪರಿಶ್ರಮಕ್ಕೆ ಅರ್ಧ ದಿನದಲ್ಲಿಯೇ ಅದರ ಪ್ರತಿಫಲ ಸಿಕ್ಕೇ ಬಿಟ್ಟಿತು. ನಮ್ಮೆಲ್ಲ ಸದಸ್ಯರ ಮೊಗದಲ್ಲಿ ಕಿರು ಸಂತಸವನ್ನೇ ತರಿಸಿತು. ಎಲ್ಲಾ ನೃತ್ಯ ಸ್ಪರ್ಧೆ ಮುಗಿದ ನಂತರ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಪದಕಗಳನ್ನು ಕೊಡುವುದರ ಮೂಲಕ ಅವರ ಪ್ರತಿಭೆಯನ್ನು ಈ ಮೂಲಕ ಗೌರವಿಸಲಾಯಿತು. ಇದೆಲ್ಲಾ ಆಗೋ ಹೊತ್ತಿಗೆ ಎಲ್ಲರ ಮನದಲ್ಲಿ ಮೂಡಿದ ಪ್ರಶ್ನೆ ಒಂದೇ ಯಾರು ವಿಜೇತರು ಎಂಬುದು..‌ ಅದನ್ನು ಅತಿಥಿಗಳು ಹಾಗೂ ನಿರ್ಣಾಯಕರಾಗಿ ಬಂದ ಶ್ರೀಮತಿ ರೂಪಾ ಸತೀಶ್, ಶ್ರೀ ಅಜಾದ್ ಐ ಎಸ್, ಶ್ರೀಮತಿ ಅಂಜಲಿ ಹಳಿಯಾಳ್ ಘೋಷಣೆ ಮಾಡಿದರು. ನೃತ್ಯ ಸ್ಪರ್ಧೆಯ ವಿಜೇತರಾಗಿದ್ದು ಶಿಶುಮಂದಿರ ಆಶ್ರಮದವರು. ದ್ವಿತೀಯ ಸ್ಥಾನವನ್ನು ಸಹಸ್ರ ದೀಪಿಕ ಆಶ್ರಮದವರು ಹಾಗೂ ತೃತೀಯ ಸ್ಥಾನವನ್ನು ಸ್ನೇಹಜ್ಯೋತಿ ಆಶ್ರಮದವರು ಪಡೆದುಕೊಂಡರು. ಕಾರ್ಯಕ್ರಮ ನೋಡಲು ಬಂದ ಓರ್ವರು ಸ್ವಲ್ಪದರಲ್ಲಿಯೇ ಮೂರನೇ ಸ್ಥಾನದಿಂದ ವಂಚಿತರಾದ ಕಲ್ಪವೃಕ್ಷ ಆಶ್ರಮದವರಿಗೆ ತಾವು ಪುಟ್ಟ ಬಹುಮಾನವನ್ನು ನೀಡುವುದರ ಮೂಲಕ ಗೌರವಿಸಿದರು. ಅವರಿಗೂ ಕೂಡ ಸ್ನೇಹಲೋಕ ಬಳಗದ ಪರವಾಗಿ ಧನ್ಯವಾದಗಳು. ಅಂತಿಮವಾಗಿ ವಂದನಾರ್ಪಣೆ ನಡೆಸಿಕೊಟ್ಟಿದ್ದು ರತಿ ಪ್ರಜೀತ್ ಅವರು.
ಇದೆಲ್ಲಾ ಆಗೋ ಹೊತ್ತಿಗೆ ಸಮಯ ಎರಡು ಮೂವತ್ತು ಆಗಿತ್ತು .. ಎಲ್ಲರಿಗೂ ಹೊಟ್ಟೆ ತಾಳ ಹಾಕುತಿತ್ತು. ಮೊದಲಿಗೆ ಎಲ್ಲಾ ಆಶ್ರಮದ ಮಕ್ಕಳಿಗೆ ಊಟವನ್ನು ನೀಡಿ ನಂತರ ನಮ್ಮ ಬಳಗದ ಸದಸ್ಯರು ಊಟ ಮಾಡಿದರು.
ಊಟದ ವಿರಾಮ ಮುಗಿದ ನಂತರ ಆರಂಭ ಆಗಿದ್ದು ನಮ್ಮ ಸ್ನೇಹಲೋಕ ಸದಸ್ಯರಿಂದ ಕಾರ್ಯಕ್ರಮ. ನಮ್ಮ ಬಳಗದ ಖ್ಯಾತ ಗಾಯಕರಾದ ಅಶ್ವಥ್ ಬಿಡದಿ , ರಮೇಶ್ ರಮ್ಮಿ ಹಾಗೂ ಸ್ಟಾರ ಮೇಕರ್ ಸಿಂಗರ್ಸ್ ಇಂದ ಗಾಯನ ಕಾರ್ಯಕ್ರಮ ನಡೆಯಿತು. ಎರಡನೇ ಹಂತದ ಕಾರ್ಯಕ್ರಮದ ನಿರೂಪಣೆ ಜವಾಬ್ದಾರಿ ಹೊತ್ತವರು ಶ್ರೀಮತಿ ರೇಣುಕಾ ಭುವನ್ ಹಾಗೂ ಶ್ರೀ ರವಿ ಸಕಲೇಶಪುರ ಇವರು.



ಕರ್ನಾಟಕದ ಹಾಗೂ ನಮ್ಮ ನೆರೆ ಹೊರೆ ರಾಜ್ಯದ ವಿಭಿನ್ನ ಸಂಸ್ಕೃತಿಯನ್ನು ವೇಷಭೂಷಣದ ಮೂಲಕ ವೇದಿಕೆಯನ್ನು ಆವರಿಸಿಕೊಂಡಿದ್ದು ನಮ್ಮ ಸ್ನೇಹಲೋಕ ಜ್ಯೂನಿಯರ್ಸ್.. ತಮ್ಮ ಪುಟ್ಟ ಪುಟ್ಟ ಹೆಜ್ಜೆಯ ಮೂಲಕ ನೆರೆದ ಜನರನ್ನು ರಂಜಿಸಿದರು. ನಂತರ  ರಾಜಸ್ತಾನಿ ನೃತ್ಯದ ಮೂಲಕ ನಮ್ಮೆಲ್ಲರನ್ನು ರಂಜಿಸಿದ ಶ್ರೀಮತಿ ಸ್ವಾತಿ ಮಹೇಶ್ ಹಾಗೂ ಅವರ ಮಗಳು .
ಭರತನಾಟ್ಯ, ಹಾಗೂ ಇನ್ನೀತರ ಕಾರ್ಯಕ್ರಮ ಮುಗಿಯೋ ಹೊತ್ತಿಗೆ ಸಂಜೆ 5 ಆಗಿತ್ತು. ಕಾರ್ಯಕ್ರಮ ಮುಗಿಯೋ ಸಮಯ ಕೂಡ ಆಗಿತ್ತು. ನಂತರ ಎಲ್ಲಾ ಸದಸ್ಯರು ವಾರ್ಷಿಕೋತ್ಸವದ ಸವಿನೆನಪಿಗಾಗಿ ಗ್ರೂಪ್ ಪೋಟೋ ತೆಗೆಸಿಕೊಂಡು ಕೂಡ ಆಯ್ತು.
ಎಲ್ಲರ ಮೊಗದಲ್ಲಿ ಒಂದು ಯಶಸ್ವಿ ವಾರ್ಷಿಕೋತ್ಸವವನ್ನು ಆಚರಣೆ ಮಾಡಿದ ತೃಪ್ತಿ. ಒಬ್ಬೊಬ್ಬರಾಗಿಯೇ ಕಾರ್ಯಕ್ರಮದ ಸ್ಥಳದಿಂದ ತಮ್ಮ ತಮ್ಮ ಮನೆಗೆ ಹೊರಟಿದ್ದು ಕೂಡ ಆಯ್ತು.
ಒಂದು ಕಾರ್ಯಕ್ರಮ ನಡೆಸುವುದರ ಹಿಂದೆ ಎಷ್ಟೊಂದು‌ ಪರಿಶ್ರಮ, ಕೆಲಸ ಕಾರ್ಯಗಳು ಇವೆಲ್ಲವೂಗಳನ್ನು ಒಂದೇ ಕ್ಷಣದಲ್ಲಿ ನೀಗಿಸುವುದು ಆ ಕಾರ್ಯಕ್ರಮ ಸಂಪೂರ್ಣವಾಗಿ ಯಶಸ್ಸು ಕಾಣುವುದರ ಮೂಲಕ. ಅದು ಈಡೇರಿದೆ. ಮತ್ತೇ ಇಂತಹದೇ ಕಾರ್ಯಕ್ರಮದ ಮೂಲಕ ಮುಂದೇ ಯಾವತ್ತಾದರೂ ಸಿಗೋಣ. ಕಾರ್ಯಕ್ರಮಕ್ಕೆ ಸಹಾಯ ಸಹಕಾರ ನೀಡಿದ ಎಲ್ಲಾ ಸದಸ್ಯರಿಗೂ ತುಂಬು ಹೃದಯದ ಧನ್ಯವಾದಗಳು. ನಿಮ್ಮೆಲ್ಲರ ಇದೇ ರೀತಿಯ ಸಹಾಯ, ಸಹಕಾರ ಯಾವತ್ತೂ ಹೀಗೆ ಇರಲಿ. ಈ ನಮ್ಮ ಸ್ನೇಹಲೋಕ ನಿತ್ಯನೂತನವಾಗಿರಲಿ.
ಜೈ ಸ್ನೇಹಲೋಕ..