ಸೋಮವಾರ, ನವೆಂಬರ್ 27, 2017

೨೩ ನೇ ಕನ್ನಡ ಮಾತಾಡಿ ಅಭಿಯಾನ ಮೈಸೂರು


ನಮ್ಮ ಕಂಕಣ ಬಳಗದ ಕನ್ನಡ ಮಾತಾಡಿ ಅಭಿಯಾನ ಕಳೆದ ಮೂರು ವರ್ಷಗಳಿಂದ ನಡೆಯುತ್ತಾ ಇರೋದು ತಮಗೆಲ್ಲಾ ಗೊತ್ತಿರುವ ವಿಷಯ. ಇದುವರೆಗೆ ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ಕನ್ನಡಿಗರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿ ಒಟ್ಟು 22 ಅಭಿಯಾನವನ್ನು ನಡೆಸಿಕೊಂಡು ನಮ್ಮದೊಂದು ವಿಭಿನ್ನ, ಶಿಸ್ತುಬದ್ಧ, ಯಾರಿಗೂ ತೊಂದರೆ ನೀಡದೆ ಮೌನವಾಗಿ ನಮ್ಮ ಉದ್ದೇಶವನ್ನು ಜನರಿಗೆ ತಲುಪಿಸುವಲ್ಲಿ ನಮ್ಮ ಕಾರ್ಯವನ್ನು ಮಾಡಿಕೊಂಡು ಬಂದಿದ್ದೇವೆ. ನಮ್ಮ ಈ ಎಲ್ಲಾ ಅಭಿಯಾನದ ಸಮಯದಲ್ಲಿ ಅನೇಕ ಜನರು ನಮಗೆ ಪ್ರೋತ್ಸಾಹ ಹಾಗೂ ತಾವು ಕೂಡ ನಮ್ಮ ಜೊತೆ ಭಾಗಿಯಾಗಿ ಬೆಂಬಲ ನೀಡಿದ್ದಾರೆ. ನಮ್ಮ ಬಳಗದ ಮುಂದಿನ ಅಭಿಯಾನ ನಡೆದದ್ದು ಸಾಂಸ್ಕೃತಿಕ ನಗರಿ ಎಂದೇ ಪ್ರಸಿದ್ಧಿ ಪಡೆದ ಮೈಸೂರಿನಲ್ಲಿ. 83 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಮ್ಮ ಈ ಬಾರಿಯ ಕನ್ನಡ ಮಾತಾಡಿ ಅಭಿಯಾನ ನಿಜಕ್ಕೂ ಹೊಸ ಅನುಭವ, ವರ್ಣಿಸಲಾಗದ ಖುಷಿಯನ್ನು ನೀಡಿರುವದರಲ್ಲಿ ಯಾವುದೇ ಸಂದೇಹವಿಲ್ಲ. ಇದೇ ಮೊದಲ ಬಾರಿಗೆ ನಮ್ಮ ಅಭಿಯಾನ ಬೆಂಗಳೂರಿನಿಂದ ಆಚೆ ನಡೆದಿರುವುದು ಹಾಗೇ ಕನ್ನಡ ಸಾಹಿತ್ಯ ಲೋಕದ ದೊಡ್ಡ ಹಬ್ಬ ಎಂದೇ ಕರೆಯಲ್ಪಡುವ ಸಾಹಿತ್ಯ ಸಮ್ಮೇಳನದಲ್ಲಿ ನಮ್ಮ ಅಭಿಯಾನ ಮಾಡಿರೋದು ನಮ್ಮ ಪಾಲಿಗೆ ಹೆಮ್ಮೆಯ ವಿಷಯ. ಬಿರು ಬಿಸಿಲಿದ್ದರೂ ಪ್ರಯಾಣದ ಆಯಾಸ ಇದ್ದರೂ ಮಧ್ಯಾಹ್ನದ ವೇಳೆಯಲ್ಲಿ ನಡೆದರೂ ಯಾವುದನ್ನು ಲೆಕ್ಕಿಸದೇ ಕನ್ನಡದ ಮೇಲಿನ ಪ್ರೀತಿ, ಅಭಿಮಾನ,ಉತ್ಸಾಹ,  ಇವೆಲ್ಲವನ್ನೂ ಕ್ಷಣಮಾತ್ರದಲ್ಲಿ ಮರೆಸಿ ಮೈಸೂರಿನ ಹಾಗೇ ರಾಜ್ಯದ ವಿವಿಧ ಜಿಲ್ಲೆಯಿಂದ ಬಂದ ಸಾಹಿತ್ಯಾಸಕ್ತರ ಮನಸ್ಸನ್ನು ಸೆಳೆಯುವಲ್ಲಿ ಯಶಕಂಡು ನಮ್ಮ ಎಲ್ಲಾ ಸದಸ್ಯರ ಮೊಗದಲ್ಲಿ ನಗೆಯ ಚಿಲುಮೆಯನ್ನು ಇಮ್ಮಡಿಗೊಳಿಸಿತು. ಕೆಲವೊಂದು ಜನ ಅದು ಸರಿ ಇಲ್ಲ ಇದು ಸರಿ ಇಲ್ಲ ಅಂದರೂ ಅವರ ಪ್ರಶ್ನೆಗೆ ಅಷ್ಟೇ ಶಾಂತಚಿತ್ತರಾಗಿ ನಮ್ಮ ಉದ್ದೇಶಗಳನ್ನು ತಿಳಿಸಿ ಅವರ ಮನಸ್ಸಿನಲ್ಲಿ ಇದ್ದ ಗೊಂದಲಗಳನ್ನು ಬಗೆಹರಿಸುವ ಕಾರ್ಯ ಕೂಡ ಮಾಡಿದ್ದು ಸಂತಸದ ವಿಷಯ. ನಮ್ಮ ಈ ಪ್ರಯತ್ನದಿಂದ ಕನ್ನಡಿಗರು ಮೊದಲು ಕನ್ನಡವನ್ನು ಅತ್ಯಂತ ಪ್ರೀತಿಯಿಂದ ಎಲ್ಲಾ ಕಡೆ ಜಾಸ್ತಿಯಾಗಿ ಮಾತನಾಡಿ ಕರುನಾಡಿನಲ್ಲಿ ಇರಬೇಕಾದರೆ ಕನ್ನಡ ಅವಶ್ಯಕ ಎನ್ನುವ ಅನಿವಾರ್ಯ ಪರಿಸ್ಥಿತಿ ಸೃಷ್ಟಿ ಮಾಡಬೇಕು. ಆಗ ಮಾತ್ರ ನಮ್ಮ ರಾಜ್ಯದಲ್ಲಿ ಉದ್ಯೋಗ ನಿಮಿತ್ತ ಬಂದು ಹಾಗೇ ಇಲ್ಲೇ ವಾಸವಾಗಿರುವ ಅನ್ಯಭಾಷಿಕರಿಗೆ ಕನ್ನಡ ಕಲಿಯದಿದ್ದರೆ ಇಲ್ಲಿ ಇರೋದು ಸಾಧ್ಯವಿಲ್ಲ ಎಂದು ಅನಿಸಿ ಕನ್ನಡ ಕಲಿಯುವ ಆಸಕ್ತಿ ಬರಬಹುದು. ಇದೆಲ್ಲಾ ಸಾಧ್ಯ ಅಂತ ಮಾಡಬೇಕಾದವರು ನಾವುಗಳು. ಮೊದಲು ನಾವು ಬದಲಾಗಬೇಕು. ನಂತರ ಇನ್ನೊಬ್ಬರನ್ನು ಬದಲಾಯಿಸುವ ಪ್ರಯತ್ನ ಮಾಡಬೇಕು. ಅದು ಆದಾಗ ಮಾತ್ರ ನಮ್ಮ ಕರುನಾಡಿನಲ್ಲಿ ಕನ್ನಡದ ಡಿಂಡಿಮ ಪ್ರತಿದಿನ, ಪ್ರತಿಕ್ಷಣ ಮೊಳಗಲು ಸಾಧ್ಯ.
ಕನ್ನಡಿಗರೇ ಮೊದಲು ನೀವು ಕನ್ನಡ ಮಾತಾಡಿ ಇಷ್ಟೇ ನಮಗೆ ಬೇಕಾಗಿರೋದು. ಮಾತಾಡ್ತಿರಾ ಹಾಗೇ 2000 ವರ್ಷಗಳಷ್ಟು ಹಳೆಯ ಇತಿಹಾಸ ಹೊಂದಿರುವ ನಮ್ಮ ಈ ಕನ್ನಡದ ಕಂಪನ್ನು ವಿಶ್ವಮಟ್ಟಕ್ಕೆ ಪಸರಿಸುವಂತೆ ಮಾಡೋಣ.
ಧನ್ಯವಾದಗಳೊಂದಿಗೆ,

ಪ್ರವೀಣ ಕಾಗಾಲ.
ಕುಮಟಾ. ಉತ್ತರ ಕನ್ನಡ.

ಬುಧವಾರ, ನವೆಂಬರ್ 1, 2017

ಕನ್ನಡ ರಾಜ್ಯೋತ್ಸವದ ಸಂಭ್ರಮ


ನಮಸ್ತೇ ಕನ್ನಡದ ಮನಸ್ಸುಗಳಿಗೆ....

ಜೀವನ ಸಾರ್ಥಕ ಅನಿಸಿದ ದಿನ. ನಿಜ ಹುಟ್ಟಿದರೇ ಕನ್ನಡ ನಾಡಿನಲ್ಲಿ ಹುಟ್ಟಬೇಕು. ಮೆಟ್ಟಿದರೆ ಕನ್ನಡ ಮಣ್ಣನು ಮೆಟ್ಟಬೇಕು. ನಿಜಕ್ಕೂ ನಾವು ಈ ಪುಣ್ಯಭೂಮಿಯಲ್ಲಿ ಜನ್ಮತಾಳಿರುವುದು ಹೆಮ್ಮೆಯ ವಿಷಯ. ಇನ್ನೊಂದು ಜನ್ಮ ಎನ್ನುವುದು ಇದ್ದರೆ ಮತ್ತೇ ಈ ಕರುನಾಡಿನಲ್ಲಿ ಹುಟ್ಟಬೇಕು ಇದೇ ನಮ್ಮೆಲ್ಲರ ಆಸೆ. ನಿನ್ನೆ ನಡೆದ ಕನ್ನಡ ರಾಜ್ಯೋತ್ಸವದ ಸಂಭ್ರಮ ಇಷ್ಟೊಂದು ಅಧ್ದೂರಿಯಾಗಿ ನಡೆಯುತ್ತೆ ಅನ್ನೋ ಕಲ್ಪನೆ ಕೂಡ ಇರಲಿಲ್ಲ. ಕನ್ನಡದ ಮನಸುಗಳ ತಂಡದಲ್ಲಿ ಇದ್ದರು ಪೂರ್ವಭಾವಿ ಕೆಲಸಕ್ಕೆ ಬರಲು ಆಗದೇ ಇರುವುದು ಬೇಸರ ತಂದರೂ ಇಂತಹದೊಂದು ಸುಂದರ ಕ್ಷಣಗಳಲ್ಲಿ ನಾನು ಕೂಡ ಭಾಗಿಯಾಗಿ ಕನ್ನಡಮ್ಮನ ಸೇವೆಯಲ್ಲಿ ನನ್ನದೊಂದು ಅಲ್ಪಕಾಣಿಕೆ ನೀಡಿರುವುದು ಸಂತಸ ತಂದಿದೆ. ಒಮ್ಮೆ ಬರದೇ ಇದ್ದರೆ ನಿಜಕ್ಕೂ ಬೇಸರ ಆಗುತಿತ್ತು. ಉತ್ತರ ಭಾರತ ಪ್ರವಾಸ ಮುಗಿಸಿಕೊಂಡು ಬಂದಿದ್ದೆ ಕನ್ನಡ ಹಬ್ಬದ ಹಿಂದಿನ ದಿನ.
ಒಂದಲ್ಲ ಒಂದು ಚಟುವಟಿಕೆಗಳಿಂದ ನಿತ್ಯವೂ ಕನ್ನಡದ ಸೇವೆ ಮಾಡುತ್ತ ನಾವು ನವೆಂಬರ್ ಕನ್ನಡಿಗರಲ್ಲ ಅನ್ನೋದನ್ನು ನಿರೂಪಿಸಿದ ಕನ್ನಡ ಮನಸುಗಳ ತಂಡವು ಇದೇ ರೀತಿ ನವನವೀನ ಕಾರ್ಯಕ್ರಮ ನಡೆಸುತ್ತಾ ಇರಲಿ. ಈ ನಮ್ಮ ಕನ್ನಡ ಭಾಷೆ ಜಗತ್ತಿನಾದ್ಯಂತ ಪಸರಿಸಲು ಮುನ್ನುಡಿ ಬರೆಯಲಿ ಇದೇ ನಮ್ಮ ಹಂಬಲ.
ಸಾವಿರಾರು ವರ್ಷಗಳ ಇತಿಹಾಸ ಇರುವ ಈ ನಮ್ಮ ಕನ್ನಡ ಭಾಷೆಯ ಮಹತ್ವವನ್ನು ಈ ಜಗತ್ತಿಗೆ ತಿಳಿಸುವ ಕಾರ್ಯ ನಮ್ಮಿಂದಾಗಲಿ.
ನಿನ್ನೆಯ ಕಾರ್ಯಕ್ರಮದ ಬಗ್ಗೆ ಹೇಳಲು ಮಾತುಗಳೇ ಹೊರಡುತ್ತಿಲ್ಲ. ಇತಿಹಾಸದ ಪುಟಗಳಲ್ಲಿ ಸೇರಿದ ಒಂದು ಕಾರ್ಯಕ್ರಮ. ದಾಖಲೆಯ ೨೦೪೦ ಮೀಟರ್ ಉದ್ದದ ಕನ್ನಡ ಭಾವುಟದ ಭವ್ಯ ಮೆರವಣಿಗೆ, ಕನ್ನಡ ಹಾಡುಗಳ ಕಲರವ, ಜಾನಪದ ಸೊಗಡಿನ ನೃತ್ಯ, ಕನ್ನಡ ಫೋಷಣೆಗಳು ಮುಗಿಲು ಮುಟ್ಟುವಂತೆ ಮಾಡಿದ ಕನ್ನಡಾಭಿಮಾನಿಗಳ ಉತ್ಸಾಹ, ಆರೂ ಕಿ.ಮೀ ಸಾಗಿದರೂ ಯಾರೊಬ್ಬರ ಮೊಗದಲ್ಲಿಯೂ ದಣಿಯರಿಯದ ಉತ್ಸಾಹ, ಹೊಸ ಭಾಷ್ಯ ಬರೆದ ಸಂಚಾರಿ ಕವಿಗೊಷ್ಠಿ, ಅನೇಕ ಗಣ್ಯವ್ಯಕ್ತಿಗಳು ನಮ್ಮೆಲ್ಲರ ಜೊತೆ ಪಾಲ್ಗೊಂಡು ನಮ್ಮ ಕಾರ್ಯವನ್ನು ಬೆಂಬಲಿಸಿದ್ದು, ಹಾಗೇ ನಾನು ಇಷ್ಟಪಡುವ ನನ್ನ ಪ್ರೀತಿಯ ಸ್ನೇಹಲೋಕ ಗೆಳೆಯರ ಬಳಗದ ಆಗಮನ, ಮುದ್ದು ಮುದ್ದು ಮನಸ್ಸಿನ ವಿದ್ಯಾರ್ಥಿಗಳ ಹುರುಪು, ನಮ್ಮ ಜೊತೆ ಬಂದು ನಮ್ಮೆಲ್ಲರ ರಕ್ಷಣೆಗೆ ನಿಂತ ಆರಕ್ಷಕರ ಶ್ರಮ, ಟ್ರಾಫಿಕ್ ಜಾಮ್ ಆದರೂ ಪರವಾಗಿಲ್ಲ ಕನ್ನಡ ಹಬ್ಬದ ಸೇವೆಗೆ ಜೈ ಅಂದ ಸಾರ್ವಜನಿಕರ ಬೆಂಬಲ ಇನ್ನೇನೂ ಹೇಳಲಿ ಈ ನಮ್ಮ ಕನ್ನಡ ಹಬ್ಬದ ಸಂಭ್ರಮ ಎಲ್ಲೆಲ್ಲೂ ಪಸರಿಸುವಂತೆ ಮಾಡಿರೋದು ನಾವೆಲ್ಲರೂ ಹೆಮ್ಮೆ ಪಡುವ ವಿಷಯ.
ಇನ್ನೂ ಈ ಒಂದು ಕಾರ್ಯಕ್ರಮ ಇಷ್ಟೊಂದು ದೊಡ್ಡ ಮಟ್ಟಿಗೆ ಯಶಸ್ಸು ಕಾಣಬೇಕಾದರೆ ಅದರ ಹಿಂದೆ ಒಂದು ದೊಡ್ಡ ಶಕ್ತಿಯೇ ಇರಬೇಕು. ಇಲ್ಲದಿದ್ದರೆ ಯಾವುದು ಸಾಧ್ಯವಿಲ್ಲ. ಈ ಕಾರ್ಯಕ್ರಮದ ಸಲುವಾಗಿ ಹಗಲಿರುಳು ಎನ್ನದೇ ಶ್ರಮಿಸಿದ ಕನ್ನಡ ಮನಸುಗಳ ತಂಡಕ್ಕೆ ತುಂಬು ಹೃದಯದ ಧನ್ಯವಾದಗಳು. ನಿಮ್ಮ ಈ ನಿಷ್ಕಲ್ಮಶ ಸೇವೆಯೇ ಇಂದಿನ ಈ ದಾಖಲೆಯ ಯಶಸ್ಸಿಗೆ ಮೂಲ ಕಾರಣ ಈ ನಿಮ್ಮ ಕಾರ್ಯದಲ್ಲಿ ನನ್ನನ್ನು ಜೊತೆಯಾಗಿ ಕನ್ನಡದ ಸೇವೆ ಮಾಡಲು ಅವಕಾಶ ಮಾಡಿಕೊಟ್ಟ ಪ್ರತಿಯೊಬ್ಬರಿಗೂ ತುಂಬು ಹೃದಯದ ಧನ್ಯವಾದಗಳು. ನಿಮ್ಮಲ್ಲಿನ ಈ ಉತ್ಸಾಹ, ಅಭಿಮಾನ ಸದಾ ಹೀಗೆ ಇರಲಿ. ನಾಡಿನಾದ್ಯಂತ ಈ ನಮ್ಮ ಕನ್ನಡದ ಕಂಪು ಹರಡಲಿ. ಕನ್ನಡ ನಮ್ಮೆಲ್ಲರ ಉಸಿರಾಗಲಿ ಇದೇ ನಮ್ಮೆಲ್ಲರ ಆಶಯ.
ಜೈ ಕರ್ನಾಟಕ ಮಾತೆ.

~ ಪ್ರವೀಣ ಕಾಗಾಲ.
ಕುಮಟಾ. ಉತ್ತರ ಕನ್ನಡ ಜಿಲ್ಲೆ.

ಸೋಮವಾರ, ಸೆಪ್ಟೆಂಬರ್ 25, 2017

ಗ್ರಾಮ ಒಕ್ಕಲು ಯುವ ಬಳಗ ಕುಮಟಾ

ಹುಟ್ಟಿದ ಮೇಲೆ  ಏನಾದರೂ ಸಾಧಿಸಬೇಕು. ನಮ್ಮ ಹೆಸರು ಮುಂದಿನ ತಲೆಮಾರಿನ ಜನರು ನೆನಪಿಸಿಕೊಳ್ಳಬೇಕು. ಹೌದು..!!!
ಇಂತಹ ಸದುದ್ದೇಶ ಇಟ್ಟುಕೊಂಡು ಜನ್ಮತಾಳಿದ ಒಂದು ಒಳ್ಳೆಯ ಮನಸ್ಸಿನ ಸಮಾನ ಮನಸ್ಕರಿಂದ ಕೂಡಿದ ತಂಡವೇ ಈ "ಗ್ರಾಮ ಒಕ್ಕಲು ಯುವ ಬಳಗ". ನಿಜಕ್ಕೂ ಸಮಾಜ ಹೆಮ್ಮೆಪಟ್ಟುಕೊಳ್ಳುವಂತಹ ಸಾಧನೆ ಮಾಡುತ್ತಿದೆ. ಜನ್ಮ ತಾಳಿ ಆಗಲೇ ಒಂದು ವರ್ಷ ಕಳೆದಿದೆ. ಸಮಾಜಕ್ಕೆ ಈ ಕಡಿಮೆ ಸಮಯದಲ್ಲಿಯೇ ಉಪಯೋಗಕಾರಿ ಆಗುವಂತಹ ಕೆಲಸ ಮಾಡಿರುವುದು ತುಂಬಾನೆ..!
ಸಮಾಜದ ಜನರಿಗೆ ಒಳಿತು ಆಗಬೇಕು ಎಂಬ ಧ್ಯೇಯ ಇಟ್ಟುಕೊಂಡು ಇಲ್ಲಿಯವರೆಗೆ ಸಮಾಜದ ಜನರಿಗೆ ಅವಶ್ಯಕತೆ ಇರುವ ಅನೇಕ ಕೆಲಸ ಮಾಡಿದೆ.  ಅದರಲ್ಲಿ  ಮುಖ್ಯವಾದುದು. ಅಪಘಾತದಿಂದ ಗಾಯಾಳು ಆದವರಿಗೆ ಚಿಕಿತ್ಸೆ ಕೊಡಿಸಲು ಸಹಾಯ ಧನ ಕೊಡೋದು. ಅದು ಎಷ್ಟೇ ಆಗಿರಲಿ. ಈ ತರಹದ ಸಮಾಜಮುಖಿ ಕೆಲಸ ಮಾಡೋ ಮನಸ್ಸು ಯಾರಿಗು ಇರಲ್ಲ. ಅದನ್ನು ಹೋಗಲಾಡಿಸಿ ಈ ಕಾರ್ಯ ಮಾಡುತ್ತಿರುವುದು ನಿಜಕ್ಕೂ ಖುಷಿಯ ವಿಚಾರ. ಇದು ಹೀಗೆ ಮುಂದುವರೆಯಲಿ..
ಹಾಗೇ ಇನ್ನೊಂದು ಪ್ರಮುಖ ಕೆಲಸ ಮಾಡಿದ್ದು ರಕ್ತದಾನ. ಒಂದು ಜೀವವನ್ನು ಉಳಿಸುವ ಪುಣ್ಯದ ಕೆಲಸ. ಇಲ್ಲಿಯವರೆಗೆ ಸುಮಾರು ಜನರಿಗೆ ಯುವ ಬಳಗದ ಸದಸ್ಯರು ರಕ್ತ ನೀಡಿ ಪ್ರಾಣ ಉಳಿಸಿದ್ದಾರೆ. ರಕ್ತ ನೀಡಲು ಮುಂದೆ ಬಂದ ಎಲ್ಲರೂ ಕೂಡ ಈ ಅಭಿನಂದನೆಗೆ ಅರ್ಹರು. ನಿಮ್ಮ ಈ ಮಾನವೀಯತೆಯ ಕಾಳಜಿಗೆ ವಂದನೆ. ನಿಮ್ಮ ಸಹಕಾರ ಹೀಗೆ  ಇರಲಿ.
ಇನ್ನೂ ಅನೇಕ ಸಮಾಜಮುಖಿ ಕೆಲಸ ಮಾಡಿದ ಯುವ ಬಳಗ ಇತ್ತೀಚೆಗೆ ಅಷ್ಟೇ ಹೊದಿಕೆಶಿರೂರು ಗ್ರಾಮದಲ್ಲಿ ಸಮಾಲೋಚನೆ ಸಭೆ ಹಾಗೂ ಉಚಿತ ಪಠ್ಯ ಪುಸ್ತಕ ವಿತರಣೆ ಕಾರ್ಯಕ್ರಮ ಮಾಡಿ ಮತ್ತೊಂದು ಸಮಾಜ ಮೆಚ್ಚುವ ಕೆಲಸಕ್ಕೆ ಮುನ್ನುಡಿ ಬರೆಯಿತು. ಈ ಕಾರ್ಯಕ್ರಮ ಯಶಸ್ವಿಗೊಳಿಸಲು ಸಹಕರಿಸಿದ ಎಲ್ಲಾ ಯುವಮಿತ್ರರಿಗೂ ಎಷ್ಟು ಕೃತಜ್ಞತೆ ಹೇಳಿದರು ಸಾಲದು.
ನಿಮ್ಮೆಲ್ಲರ ಇದೇ ತರಹದ ಸಹಾಯ ಸಹಕಾರ ಇದ್ದರೆ ಈ ನಮ್ಮ ಯುವ ಬಳಗ ಮುಂದಿನ ದಿನಗಳಲ್ಲಿ ಇನ್ನಷ್ಟು ಇದೇ ತರಹದ ಕಾರ್ಯವನ್ನು ಮಾಡುವ ಹೊಸ ಹುಮ್ಮಸ್ಸು ಬರುತ್ತದೆ. ಇರಲಿ ಇರುತ್ತದೆ ಎಂಬ ಆಶಾಭಾವನೆ ನಮ್ಮದು.
ಧನ್ಯವಾದಗಳೊಂದಿಗೆ..

       ಪ್ರವೀಣ ಕಾಗಾಲ.
      ಬೆಂಗಳೂರು.

ಸೋಮವಾರ, ಮಾರ್ಚ್ 6, 2017

ಕವಿತೆ


ಸಮುದ್ರದ ಅಲೆಯಲಿ ಹೂವು ಒಂದು
ತೇಲುತ ಬರುತಿತ್ತು.
ಹಾಲಿನ ನೊರೆಯ ತೆರೆಯಲಿ ಸಿಕ್ಕಿ
ಕುಣಿಯುತ ಬರುತಿತ್ತು.

ಜಲಚರ ಬಳಗದಿ ತಾನೊಂದಾಗಿ
ನಲಿಯುತ ಬರುತಿತ್ತು.
ರಭಸದ ತೆರೆಗೆ ನಡುಗಿ
ಹೆದರಿ ಬರುತಿತ್ತು.

ಕಂಪನು ಸೂಸುತ ಸಮುದ್ರದಿ
ತಂಪನ್ನು ಹರಡಿತ್ತು.
ಲವಣದ ನೀರಿಗೆ ಕೊಂಚ
ಪರಿಮಳವ ನೀಡಿತ್ತು.

ನೀರಲ್ಲಿ ಕೊಚ್ಚಿಹೋಗುವನೆಂಬ
ಭಯಕ್ಕೆ ಬೇಗನೆ ಬರುತಿತ್ತು.
ಬೇಗನೆ ದಡವನ್ನು ಸೇರುವ 
ಆತುರ ಅದಕ್ಕೆ ಇತ್ತು.

ಸಂಜೆಯಾಗುತಲಿ ದಡದ ತುಂಬಾ
ಜನಸಾಗರವೇ ನೆರೆದಿತ್ತು.
ದಡವನು ತಲುಪಿದ ಹೂವು
ಯಾರದೋ ಕಾಲಡಿಯಾಗಿತ್ತು.

     ಪ್ರವೀಣ ಕಾಗಾಲ.ಕುಮಟಾ.

ಮೂಕ ಪ್ರಾಣಿಯ ಪ್ರೀತಿ.

ಅದೊಂದು ಪುಟ್ಟ ಊರು. ಆ ಊರಿನಲ್ಲಿ ಸೊಮೇಗೌಡ ಎಂಬ ಮಧ್ಯಮವರ್ಗದ ವ್ಯಕ್ತಿಯು ತನ್ನ ಹೆಂಡತಿ ಹಾಗೂ ಎರಡು ಮಕ್ಕಳೊಂದಿಗೆ ಬಾಳ್ವೆ ನಡೆಸುತ್ತಿದ್ದನು.ಸೊಮೆಗೌಡನು ಇತರರಿಗೆ ಯಾವಾಗಲೂ ಸಹಾಯ ಮಾಡುತ್ತ ತನ್ನ ಎರಡು ಮಕ್ಕಳನ್ನು ಒಳ್ಳೆಯ ವ್ಯಕ್ತಿಗಳನ್ನಾಗಿ ರೂಪಿಸಲು ಇವರು ಶ್ರಮಿಸುತ್ತಿದ್ದರು.ಸೊಮೇಗೌಡನ ಮಗನ ಹೆಸರು ನಿಖಿಲ್.ಹತ್ತನೆಯ ತರಗತಿಯಲ್ಲಿ ಓದುತ್ತಿದ್ದನು.ಮಗಳ ಹೆಸರು ರೂಪಾ.ಇವಳು ನಿಖಿಲ್ ಗಿಂತ ಎರಡು ವರ್ಷ ದೊಡ್ಡವಳಾಗಿದ್ದಳು.ನಗರದ ಕಾಲೇಜಿನಲ್ಲಿ ಪಿ.ಯು.ಸಿ.ದ್ವಿತೀಯ ವರ್ಷದಲ್ಲಿ ಓದುತ್ತಿದ್ದಳು. ರೂಪಾಳಿಗೆ ತನ್ನ ತಂದೆ ತಾಯಿಯೆಂದರೆ ಪಂಚಪ್ರಾಣ ..ಹಾಗೇ ಅವಳು ಚಿಕ್ಕಂದಿನಿಂದಲೂ ಇಷ್ಟಪಡುತ್ತಿದ್ದ ನಾಯಿಯನ್ನು ಕಂಡರೆ ಬಲು ಅಚ್ಚುಮೆಚ್ಚು.ಆ ನಾಯಿಗೂ ರೂಪಾಳನ್ನು ಕಂಡರೆ ಏನೋ ಒಂದು ರೀತಿಯಲ್ಲಿ ಇಷ್ಟವಾಗುತಿತ್ತು.ರೂಪಾಳು ಏನೇ ಹೇಳಿದರೂ ಆ ನಾಯಿಯು ಚಾಚುತಪ್ಪದೇ ಮಾಡುತಿತ್ತು.ರೂಪಾ ಕಾಲೇಜಿಗೆ ಯಾವತ್ತೂ ತಪ್ಪದೆ ಹೋಗುತ್ತಿದ್ದಳು.ಬಹಳ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದಳು. ರೂಪಾ ಓದುವ ಕಾಲೇಜಿನಲ್ಲಿ  ಶ್ರೀಮಂತ ಮನೆತನದಿಂದ ಬಂದಿದ್ದ ದಿಲೀಪ ಎಂಬಾತನು ಕೂಡ ಓದುತ್ತಿದ್ದನು.ತಾನು ಶ್ರೀಮಂತ ಎಂಬ ಅಹಂ ಅವನಲ್ಲಿ ಎದ್ದು ಕಾಣುತಿತ್ತು.ಇವನಿಗೆ ಹುಡುಗಿಯರ ಜೊತೆಗೆ ಸ್ನೇಹ ಬೆಳೆಸಿ ಅವರ ಜೊತೆ ಚೆಲ್ಲಾಟ ಆಡುತ್ತಿರುವುದು ಎಲ್ಲರಿಗೂ ತಿಳಿದ ವಿಷಯವಾಗಿತ್ತು. ರೂಪಾಳಿಗೆ ಕೂಡ ಇವನನ್ನು ಕಂಡರೆ ಇಷ್ಟವಾಗುತ್ತಿರಲಿಲ್ಲ. ಅವನನ್ನು ಕಂಡರೆ ಬಹಳ ದೂರ ಹೋಗುತ್ತಿದ್ದಳು. ರೂಪಾ ಇಡೀ ಕಾಲೇಜಿನಲ್ಲಿಯೇ ಅತ್ಯಂತ ಸುಂದರಿಯಾಗಿದ್ದಳು. ಯಾರಿಗಾದರೂ ಇವಳನ್ನು ಕಂಡರೆ ಒಮ್ಮೆಯಾದರೂ ಅಸೆಯಾಗದೆ ಇರುತ್ತಿರಲಿಲ್ಲ. ಅಂತಹ ಅಪ್ಸರೆಯಾಗಿದ್ದಳು.ಇವಳ ಅಂದಚೆಂದಕ್ಕೆ ಮಾರುಹೋದ ದಿಲೀಪ ಇವಳನ್ನು ಹೇಗಾದರೂ ಒಲಿಸಿಕೊಳ್ಳಬೆಕೆಂಬ ಉತ್ಕಟವಾದ ಆಸೆಯನ್ನು ಹೊಂದಿದ್ದನು. ಸುಮಾರು ಸಲ ಇವಳ ಹತ್ತಿರ ತನ್ನ ಆಸೆಯನ್ನು ಹೇಳಿಕೊಂಡಿದ್ದನು.ಇವನ ಆಸೆಗೆ ಪ್ರತಿ ಸಲವೂ ಕೂಡ ನಿರಾಕರಿಸಿದ್ದಳು ರೂಪಾ.ಇವಳ ಈ ನಿರ್ಧಾರದಿಂದ ದಿಲೀಪನು ಸ್ವಲ್ಪ ಮಟ್ಟಿಗೆ ಉತ್ಸಾಹವನ್ನು ಕಳೆದುಕೊಂಡಿದ್ದನು.ಆದರೆ ಇವಳನ್ನು ಹೇಗಾದರೂ ಮಾಡಿ ತನ್ನ ಬುಟ್ಟಿಗೆ ಹಾಕಿಕೊಳ್ಳಬೇಕೆಂದು ತೀರ್ಮಾನಿಸಿದನು.ತನ್ನ ದಾಂಡಿಗರೊಡನೆ ಒಮ್ಮೆ ಬಂದು ಹೆದರಿಸಿಯೂ ಹೋದನು.ಇಂತಹ ಒಂದು ಘಟನೆ ನಡೆದರೂ ಏನೂ ಆಗಿಲ್ಲ ಎಂಬಂತೆ ರೂಪಾ ಇದ್ದಳು.ರೂಪಾ ದಿಲೀಪನ ಬಗ್ಗೆ ಅವನು ಮಾಡಿದ ಈ ಕೃತ್ಯಗಳ ವಿಚಾರಗಳನ್ನು ತನ್ನ ತಂದೆತಾಯಿಗಳ ಹತ್ತಿರ ಕೂಡ ಹೇಳಲಿಲ್ಲ. ಅದರ ಬದಲಾಗಿ ತನ್ನ ತಮ್ಮನಾದ ನಿಖಿಲ್ ಹತ್ತಿರ ಹೇಳುತ್ತಿದ್ದಳು. ಹಾಗೇ ಯಾರಿಗೂ ಕೂಡ ಈ ವಿಷಯ ತಿಳಿಸದಂತೆ ಅವನಲ್ಲಿ ತಿಳಿಸಿದ್ದಳು.ಹೀಗೆ ಹಲವು ದಿನಗಳು ಕಳೆದವು..ದಿಲೀಪನಿಗೆ ರೂಪಾಳ ಬಗ್ಗೆ ಇದ್ದ ಆಸೆ ಸ್ವಲ್ಪವೂ ಕೂಡ ಕಮ್ಮಿಯಾಗದೇ ಅವಳನ್ನು ಹೇಗಾದರೂ ಮಾಡಿ ಪಡೆದೇ ತೀರಬೇಕೆಂದು ನಿರ್ಧರಿಸಿ ಅವಳ ಹತ್ತಿರ ಮತ್ತೊಮ್ಮೆ ಹೇಳಿದನು. ಈಗಲೂ ಸಹ ಅವಳು ಸ್ಪಷ್ಟವಾಗಿ ನಿರಾಕರಿಸಿ ಅವನ ಕೆನ್ನೆಗೆ ಎರಡೇಟು ಬಾರಿಸಿದಳು.ಇಂತಹ ಅವಮಾನವನ್ನು ಅವನಿಂದ ಸಹಿಸಲು ಸಾಧ್ಯವಾಗಲಿಲ್ಲ.ಇವಳನ್ನು ಬಲತ್ಕಾರದಿಂದನಾದರೂ ಪಡೆಯಬೇಕೆಂಬ ನಿರ್ಧಾರಕ್ಕೆ ಬಂದನು.
ಹೀಗೆ ಒಂದು ದಿನ ರೂಪಾ ತನ್ನ ಮನೆಯಿಂದ ಎರಡೂ ಕಿಲೋ ಮೀಟರ ದೂರದಲ್ಲಿ ಇರುವ ತನ್ನ ಗೆಳತಿಯ ಮನೆಗೆ ಹೋಗಿದ್ದಳು. ರೂಪಾಳ ಜೊತೆ ಅವಳು ಸಾಕಿದ ನಾಯಿಯು ಕೂಡ ಅವಳನ್ನೇ ಹಿಂಬಾಲಿಸಿ ರಕ್ಷಕನಂತೆ ಸಾಗುತಿತ್ತು.ಹೋಗುವ ದಾರಿ ಸ್ವಲ್ಪ ಕಾಡಿನಿಂದ ಕೂಡಿದ ನಿರ್ಜನ ಪ್ರದೇಶವಾಗಿತ್ತು. ಇದೇ ಒಳ್ಳೆಯ ಸಮಯವೆಂದು ನಿರ್ಧರಿಸಿ ತನ್ನ ದಾಂಡಿಗರ ಸಹಾಯದಿಂದ ದಿಲೀಪನು ಅವಳನ್ನು ಮರದ ಪೊದೆಯ ಹತ್ತಿರ ಎಳೆದುಕೊಂಡು ಬಂದನು. ಅವಳ ಜೊತೆ ಬಂದಿದ್ದ ನಾಯಿಯು ಎಷ್ಟೇ ಬೋಗಳಿದರೂ ಅವರು ರೂಪಾಳನ್ನು ಬೀಡಲಿಲ್ಲ. ತನಗೆ ಅನೇಕ ಸಾರಿ ಅವಮಾನಪಡಿಸಿದ ರೂಪಾಳನ್ನು ಅತ್ಯಾಚಾರ ಮಾಡಿ ಅವಳ ಕತ್ತು ಹಿಸುಕಿ ಕೊಲೆ ಮಾಡಿದನು.ನಂತರ ಅವಳನ್ನು ಅಲ್ಲಿಯೇ ಮರದ ಕೊಂಬೆಗೆ ಹಗ್ಗದ ಸಹಾಯದಿಂದ ನೇತುಹಾಕಿ ಹೋರಟುಹೋದನು.ಇತ್ತ ದಿಲೀಪನು ಮಾಡಿದ ಹೇಯಕೃತ್ಯವನ್ನೆಲ್ಲ ಮೂಕ ವೇದನೆಯಿಂದ ಆ ನಾಯಿಯು ನೋಡುತಿತ್ತು.
ಇತ್ತ ಮನೆಯಲ್ಲಿ ತಳಮಳ ಉಂಟಾಗಲು ಆರಂಭವಾಯಿತು.ಗೆಳತಿಯ ಮನೆಗೆ ಹೋದ ಮಗಳು ಮನೆಗೆ ಬರಲಿಲ್ಲವಲ್ಲಾ ಎಂದು ಹುಡುಕಲು ಪ್ರಾರಂಭಿಸಿದರು.ಕೊನೆಗೆ ಮರದ ಕೊಂಬೆಗೆ ನೇತುಹಾಕಿದ ಸ್ಥಿತಿಯಲ್ಲಿ ಮಗಳನ್ನು ಕಂಡು ತಂದೆ ತಾಯಿಗೆ ದಿಕ್ಕೆ ತೋಚದಂತಾಯಿತು.ಆದರೂ ಅವರ ಮನಸ್ಸಿನಲ್ಲಿ ತನ್ನ ಮಗಳು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿ ಅಲ್ಲ ಎಂಬ ಧೃಡ ವಿಶ್ವಾಸ ಅವರಿಗಿತ್ತು. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಯಿತು.ಪ್ರಕರಣದ ತನಿಖೆಯ ಮೊದಲ ಭಾಗವಾಗಿ ಶವದ ಪೊಸ್ಟಮಾರ್ಟಂ ಮಾಡಲಾಯಿತು. ಅದರ ವರದಿಯಲ್ಲಿ ರೂಪಾಳನ್ನು ಯಾರೋ ಅತ್ಯಾಚಾರ ಮಾಡಿ ಕತ್ತನ್ನು ಹಿಸುಕಿ ಕೊಲೆ ಮಾಡಲಾಗಿದೆ ಎಂದೂ ತಿಳಿಯಿತು. ರೂಪಾಳ ತಂದೆ ತಾಯಿಗೆ ತಮಗೆ ಇದ್ದ ಸಂದೇಹ ನಿಜವಾಯಿತು.ಆದರೆ ಯಾರೂ ತಮ್ಮ ಮಗಳನ್ನು ಕೊಲೆ ಮಾಡಿರಬಹುದು ಎಂಬುದು ತಿಳಿಯಲಿಲ್ಲ. ರೂಪಾಳ ಸಾವಿನಿಂದ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದರು.ಹಾಗೇ ಎಲ್ಲರೂ ಕೂಡ ಅವಳ ಅಂತ್ಯಸಂಸ್ಕಾರಕ್ಕೆ ಆಗಮಿಸಿದ್ದರು.ದಿಲೀಪನು ಕೂಡ ಏನು ಆಗಿಲ್ಲ ಎಂಬಂತೆ ಅವನು ಅಲ್ಲಿಗೆ ಬಂದಿದ್ದನು. ರೂಪಾಳ ಅಂತ್ಯಸಂಸ್ಕಾರದ ವೇಳೆ ಗಲಾಟೆ ಆಗಬಹುದು ಎಂದು ಬೀಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಇನ್ನೇನು ರೂಪಾಳ ಚಿತೆಗೆ ಬೆಂಕಿ ಇಡಬೇಕು ಎನ್ನುವಷ್ಟರಲಿ ನಾಯಿಯೂ ಜೋರಾಗಿ ಬೊಗಳುತ್ತಾ ದಿಲೀಪನ ಕಾಲನ್ನು ಹಿಡಿದುಕೊಂಡಿತು.ಇದರಿಂದ ದಿಲೀಪನಿಗೆ ಭಯ ಉಂಟಾಯಿತು.ಅಲ್ಲಿ ನೆರೆದಿದ್ದ ಎಲ್ಲಾ ವಿದ್ಯಾರ್ಥಿಗಳಿಗೂ ಕೂಡ ಆಶ್ಚರ್ಯವಾಯಿತು.ಮೊದಲೇ ಹುಡುಗಿಯರನ್ನು ಕಂಡರೆ ಜೊಲ್ಲು ಸುರಿಸುತ್ತಿದ್ದ ದಿಲೀಪನನ್ನು ಕಂಡರೆ ಎಲ್ಲರಿಗೂ ಅಷ್ಟಕಷ್ಟೇ.ಎಲ್ಲರ ಬಾಯಲ್ಲಿ ಇವನೇ ಏನಾದರೂ ಮಾಡಿರಬೇಕು ಎಂಬ ಗುಸುಗುಸು ಉಂಟಾಯಿತು. ಅಲ್ಲೇ ಇದ್ದ ಪೋಲಿಸ್ ರು ನಾಯಿಯು ಹಿಡಿದಿದ್ದ ದಿಲೀಪನನ್ನು ತಮ್ಮ ವಶಕ್ಕೆ ತೆಗೆದುಕೊಂಡು ಅವನ ಬಾಯಿ ಬಿಡಿಸಲು ಪ್ರಯತ್ನಿಸುತ್ತಾರೆ.ಮೊದಮೊದಲು ಬಾಯಿಬಿಡಲು ನಿರಾಕರಿಸಿದ ದಿಲೀಪ ಪೋಲೀಸರ ಬೆತ್ತದ ಏಟಿಗೆ ಬಾಯಿಬಿಟ್ಟನು.ರೂಪಾಳು ತನಗೆ ಕಾಲೇಜಿನಲ್ಲಿ ಮಾಡಿದ ಅವಮಾನಕ್ಕೆ ತಾನು ಹೀಗೆ ಮಾಡಬೇಕಾಯಿತು ಎಂದು ತಪ್ಪನ್ನು ಒಪ್ಪಿಕೊಂಡನು.ನಂತರ ಅವನನ್ನು  ನ್ಯಾಯಾಲಯಕ್ಕೆ ಹಾಜರುಪಡಿಸಿ...ಕೊಲೆ ಮಾಡಿದ ತಪ್ಪಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಯಿತು.
ಅಂತೂ ರೂಪಾಳ ಆತ್ಮಕ್ಕೆ ಶಾಂತಿಯನ್ನು ಸಲ್ಲಿಸಲು ವಿದ್ಯಾರ್ಥಿಗಳು ಕಾಲೇಜಿನಲ್ಲಿ ಶೃದ್ಧಾಂಜಲಿ ಸಭೆ ಏರ್ಪಡಿಸಿದರು. ಈ ಸಮಾರಂಭದಲ್ಲಿ ರೂಪಾಳು ಸಾಕಿದ್ದ ನಾಯಿಯ ಚುರುಕುತನದ ಬಗ್ಗೆ ಎಲ್ಲರ ಬಾಯಿಯಲ್ಲಿ ಹೊಗಳಿಕೆಯ ಮಾತು ಬಂದಿತು. ರೂಪಾಳ ತಂದೆ ತಾಯಿಯ ಜೊತೆ ಬಂದಿದ್ದ ನಾಯಿಯ ಕಣ್ಣಿಂದ ಕಣ್ಣೀರು ಒಂದೊಂದೇ ಹನಿ ಹನಿಯಾಗಿ ಬೀಳುತಿತ್ತು.ನಾಯಿಯು ರೂಪಾಳನ್ನು ಕೊಲೆ ಮಾಡಿದವರನ್ನು ಹಿಡಿದು ಕೊಟ್ಟು ತನ್ನ ಮೂಕವೇದನೆಯ ಮೂಲಕ ಶೃದ್ಧಾಂಜಲಿಯನ್ನು ಅರ್ಪಿಸಿತು.
ಇದಲ್ಲವೇ ಮೂಕ ಪ್ರಾಣಿಯ ಪ್ರೀತಿ.

ಮಂಗಳವಾರ, ಫೆಬ್ರವರಿ 28, 2017

ಯುವ ಬಳಗದ ಸಾರ್ಥಕ ಕೆಲಸ.

ಕುಮಟಾದ ಬರ್ಗಿಯಲ್ಲಿ ಆಗ ತಾನೇ ಸೂರ್ಯ ಹುಟ್ಟುವ ಮುಂಚೆ ಒಂದು ಆಘಾತಕಾರಿ ಯಾರೂ ಕೂಡ ಊಹಿಸಲು ಅಸಾಧ್ಯವಾದ ಒಂದು ಘಟನೆ ನಡೆದುಹೋಗಿತ್ತು. ಗ್ಯಾಸ್ ಟ್ಯಾಂಕರ್ ಅಪಘಾತದಿಂದ ಒಂದು ಕುಟುಂಬವೇ ಇನ್ನಿಲ್ಲವಾಗಿತ್ತು. ಇಡೀ ಊರಿಗೇ ಊರೇ ಮುಂಜಾನೆಯೇ ಈ ಘಟನೆಯಿಂದ ಬೆಚ್ಚಿಬಿದ್ದಿತ್ತು. ಅಂದು ಸಾವನ್ನಪ್ಪಿದ್ದವರಲ್ಲಿ ಗ್ರಾಮ ಒಕ್ಕಲು ಸಮಾಜದ ಕುಟುಂಬವೇ ಒಂದು. ಆ ಘಟನೆಯ ತರುವಾಯ ಗ್ರಾಮ ಒಕ್ಕಲು ಸಮಾಜದಲ್ಲಿ ಯುವ ಶಕ್ತಿ ಒಂದಾಗಬೇಕೆಂದು ಕೆಲ ಯುವ ಮನಸ್ಸುಗಳು ತೀರ್ಮಾನ ಮಾಡಿ "ಗ್ರಾಮ ಒಕ್ಕಲು ಯುವ ಬಳಗ" ಎಂಬ ಸಂಘಟನೆಯನ್ನು ಕಟ್ಟಿಕೊಂಡು ಸಮಾಜದ ಬಂಧು ಭಾಂಧವರ ಸಹಾಯಕ್ಕೆ ಟೊಂಕ ಕಟ್ಟಿ ನಿಂತಿತು. ಅಪಘಾತದಲ್ಲಿ ಗಾಯಗೊಂಡವರಿಗೆ ಸಹಾಯ ಧನ ಹಾಗೇ ಅವಶ್ಯಕ ಸಂದರ್ಭಗಳಲ್ಲಿ ರಕ್ತ ದಾನ ಮಾಡಿ ಇನ್ನೊಂದು ಜೀವವನ್ನು ಉಳಿಸುವ ಮಹಾತ್ಕಾರ್ಯ ಮಾಡಿರೋದು ಅಭಿನಂದನಿಯ. ಇಂತಹ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತ ಬಂದಿರುವ ಈ ಯುವ ಬಳಗ ಮದ್ಗುಣಿ ಸಂಘದ ಸಹಕಾರದ ಜೊತೆಗೆ ಸೇರಿ ಅಪಘಾತ ನಿಧಿ ಇನ್ನಷ್ಟು ಕ್ರೋಢೀಕರಿಸಲು "ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿ"ಯನ್ನು ಅಯೋಜಿಸಿ ಅತ್ಯಂತ ಯಶಸ್ವಿಯಾಗಿ ನಡೆಸಿ ಸಮಾಜದ ಹಿರಿಯರ ಹಾಗೂ ಹಿತೈಷಿಗಳಿಂದ ಹೊಗಳುವಿಕೆಗೆ ಕಾರಣವಾಯಿತು. ಸಮಾಜಕ್ಕೆ ಏನಾದರೂ ಒಳ್ಳೆಯದು ಮಾಡಬೇಕೆಂಬ ಉತ್ಕಟವಾದ ಕನಸನ್ನು ಹೊತ್ತಿರುವ ಯುವ ಬಳಗದ ಶ್ರಮ ನಿಜಕ್ಕೂ ಸಾರ್ಥಕ ಆಯಿತು. ಯುವ ಬಳಗದ ಜೊತೆ ಹಗಲಿರುಳು ಶ್ರಮೀಸಿದ ಮದ್ಗುಣಿ ಯುವಕ ಸಂಘದ ಎಲ್ಲಾ ಸದಸ್ಯರು ಅಭಿನಂದನೆಗೆ ಅರ್ಹರಾಗಿದ್ದಾರೆ. ನಿಮ್ಮ ಶ್ರಮಕ್ಕೆ ಆ ದೇವರು ಖಂಡಿತ ಒಳ್ಳೆಯದು ಮಾಡುತ್ತಾನೆ. ನಿಮ್ಮ ಈ ಸೇವೆ ಹೀಗೆ ಮುಂದುವರೆಯಲಿ. ಹಾಗೇ ವಾಲಿಬಾಲ್ ಪಂದ್ಯಾವಳಿಗೆ ಯಶಸ್ಸಿಗೆ ಕಾರಣರಾದ ಎಲ್ಲಾ ಕ್ರೀಡಾಪಟುಗಳು ಹಾಗೂ ಕ್ರೀಡಾಭಿಮಾನಿಗಳು ನಿಮ್ಮನ್ನು ಮರೆಯಲು ಆದಿತೇ.. ಆಟ ಒಂದೇ ಅಲ್ಲ ಇನ್ನೂ ಮುಂದೆ ಯುವ ಬಳಗದ ಉದ್ದೇಶ ಹಾಗೂ ಮುಂದಿನ ಕಾರ್ಯಗಳಲ್ಲಿ ನಿಮ್ಮ ಕೈ ಜೋಡಿಸಿ ..
ನಮ್ಮ ಸಮಾಜವನ್ನು ಈ ಜಗತ್ತಿಗೆ ಪರಿಚಯಿಸೋಣ. ಏನಂತೀರಾ...

ಧನ್ಯವಾದಗಳೊಂದಿಗೆ..

ನಿಮ್ಮ ಪ್ರವೀಣ ಕಾಗಾಲ.
ಬೆಂಗಳೂರು.

ಸೋಮವಾರ, ಫೆಬ್ರವರಿ 27, 2017

ನ್ಯಾನೋ ಕತೆ..

ಇನ್ನೇನೂ ಸಂಜೆಯಾಗುವ ಸಮಯ.  ಸಮುದ್ರದ ತೀರದಲ್ಲಿ ಅವಳು ಒಬ್ಬಳೇ ಯಾರಿಗಾಗೋ ಕಾಯುತ್ತಿರುವ ದೃಶ್ಯ ಕಣ್ಣಿಗೆ ಬಿತ್ತು. ಹತ್ತಿರ ಹೋಗಿ ಕೇಳುವ ಮನಸ್ಸಾದರೂ ಯಾಕೋ ಅಂಜಿಕೆ. ಆದರೂ ಧೈರ್ಯ ಮಾಡಿ ಅವಳ ಕುಳಿತಿರೋ ಜಾಗದ ಬಳಿ ಹೆಜ್ಜೆ ಹಾಕುತ್ತ ಧಾವಿಸಿದೆ. ಸ್ವಲ್ಪ ದೂರವೇ ನಿಂತು ಅವಳ ಮುಖದ ಭಾವನೆಯನ್ನು ಗಮನಿಸಿದೆ ಕಣ್ಣಂಚಿನಿಂದ ಒಂದೊಂದೆ ಹನಿ ಸಮುದ್ರದ ತೀರವನ್ನು ಸೇರುತ್ತಾ ಇತ್ತು. ಯಾಕೋ ಅವಳನ್ನು ಮಾತಾನಾಡಿಸಿ ಏನಾಯ್ತು ಅಂತ ಕೇಳಬೇಕು ಅಂತ ಹೇಳಿ ಹೋಗಿ ಮಾತನಾಡಿಸಿದೆ. ಅವಳಿಂದ ಬಂದ ಉತ್ತರ ಎಕೋ ಮನಸ್ಸನ್ನೇ ಒಂದು ಸಲ ಕಲ್ಲಾಗುವಂತೆ ಮಾಡಿತು. ಅವಳ ಸಮುದ್ರದಲ್ಲಿ ಈಜಾಡುವ ಹುಚ್ಚಿಗೆ ತನ್ನ ಹೆತ್ತ ತಂದೆಯನ್ನೇ ಕಳೆದುಕೊಂಡೆ ಎಂದು. ಸಮುದ್ರದಲ್ಲಿ ಮುಳುಗುತ್ತಿರುವ ಮಗಳನ್ನು ರಕ್ಷಿಸಲು ಹೋಗಿ ತಂದೆ ಸಮುದ್ರ ಪಾಲಾಗಿದ್ದು ಅವಳ ಪಾಲಿಗೆ ಬದುಕು ಸತ್ತಂತೆ ಭಾಸವಾಗಿದೆ. ಇನ್ನೂ ತನ್ನ ತಂದೆ ಬದುಕಿ ಬರುತ್ತಾನೆ ಎಂಬ ಆಸೆಯಿಂದ ಅವಳ ಕಂಗಳು ಅತ್ತಿಂದಿತ್ತ ಹುಡುಕುತ್ತ ಇದೆ.

        ಪ್ರವೀಣ ಕಾಗಾಲ.ಕುಮಟಾ.

ಭಾನುವಾರ, ಫೆಬ್ರವರಿ 26, 2017

ಕಂಕಣ ಅಭಿಯಾನ

"ಕನ್ನಡ" ಈ ಪದ ಕೇಳೋಕೆ ಎಷ್ಟು ಚೆಂದ ಅಲ್ವಾ...! ನಿಜ ನಮ್ಮ ಕರುನಾಡಿನ ಈ ಹೆಮ್ಮೆಯ ನುಡಿ ನಮ್ಮ ಈ ಕನ್ನಡ. ಪ್ರತಿಯೊಬ್ಬರ ಹೃದಯದಲ್ಲಿ ವಿರಾಜಮನವಾಗಬೇಕಿದ್ದ ಕನ್ನಡ ಇಂದು ನಮ್ಮ ಈ ಬೆಂಗಳೂರಿನ ಕೆಲವು ಕನ್ನಡಿಗರಿಂದ ಮರೆಯಾಗುತ್ತಿರುವುದು ವಿಷಾದನೀಯ. ಕನ್ನಡಿಗರೇ ಕನ್ನಡ ಮಾತನಾಡದಿದ್ದರೆ ನಮ್ಮ ಭಾಷೆಯ ಸ್ಥಿತಿ ಏನಾಗಬಹುದು ಅಂತ ಒಮ್ಮೆ ಯೋಚಿಸಿ ಕನ್ನಡ ಬಂದರೂ ಕೂಡ ತಾವು ದಿನಂಪ್ರತಿ ವ್ಯವಹಾರ ಮಾಡುವ ಸ್ಥಳಗಳಲ್ಲಿ ಮಾತನಾಡದೆ ಇತರ ಭಾಷೆಯನ್ನು ಮಾತನಾಡುವುದು ಎಷ್ಟರಮಟ್ಟಿಗೆ ಸರಿ. ಕನ್ನಡ ಭಾಷೆಯ ಬೆಳವಣಿಗೆಗೆ ಕೊಡುಗೆ ನೀಡಬೇಕಾದ ನಾವೇ ಈ ತರ ಮಾಡಿದರೆ ಕನ್ನಡ ಭಾಷೆಯು ಜಗತ್ತಿನಾದ್ಯಂತ ಪಸರಿಸುವುದಾದರೂ ಹೇಗೆ.. ಇದೇ ಉದ್ದೇಶವನ್ನು ಇಟ್ಟುಕೊಂಡು ಕಳೆದ ಎರಡು ವರ್ಷಗಳ ಹಿಂದೆ ಜನ್ಮ ತಾಳಿದ ನಮ್ಮ ಕಂಕಣ ಬಳಗ ಕನ್ನಡಿಗರೇ ಕನ್ನಡ ಮಾತಾಡಿ ಎಂಬ ಅಭಿಯಾನವನ್ನು ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ಮಾಡುತ್ತಿರುವುದು ನಿಮಗೆಲ್ಲರಿಗೂ ಸಾಮಾಜಿಕ ಜಾಲತಾಣದ ಮೂಲಕ ಗೊತ್ತೆ ಇದೆ ಅದರ ಮುಂದುವರಿದ ಭಾಗ ಎನ್ನುವಂತೆ ಇಂದು ಸೂರ್ಯ ತನ್ನ ದಿನನಿತ್ಯದ ಕೆಲಸ ಆರಂಭ ಮಾಡುವ ಮುಂಚೆಯೇ ಕನ್ನಡಕ್ಕಾಗಿ ಕಂಕಣ ತೊಟ್ಟಿರುವ ನಮ್ಮ ಬಳಗದ ಸದಸ್ಯರು ಕಬ್ಬನ್ ಪಾರ್ಕಿನ ಪಾದಚಾರಿ ಮಾರ್ಗದಲ್ಲಿ ನಿಂತು ಕನ್ನಡ ಘೋಷವಾಕ್ಯ ಇರುವ ಫಲಕಗಳನ್ನು ಹಿಡಿದು ನಿಂತು ಕನ್ನಡದ ಡಿಂಡಿಮವನ್ನು ಸಾರಿದರು. ನಮ್ಮ ಅಭಿಯಾನದ ಸ್ಥಳದಲ್ಲಿ ಇಂದು ಮ್ಯಾರಥಾನ್ ಕೂಡ ಇದ್ದರಿಂದ ನಮ್ಮ ಅಭಿಯಾನದ ಮೂಲಕ ಕನ್ನಡ ಉಳಿಸಿ ಕೂಗು ಅತಿ ಹೆಚ್ಚು ಜನರನ್ನು ತಲುಪವಲ್ಲಿ ಯಶಸ್ವಿಯಾಯಿತು.  ಸುಮಾರು ಐದರಿಂದ ಆರು ಸಾವಿರ ಜನರಲ್ಲಿ ಕೆಲವರಾದರೂ ನಮ್ಮ ಅಭಿಯಾನದ ಉದ್ದೇಶ ತಿಳಿದುಕೊಂಡು ನಮ್ಮ ಜೊತೆ ಪಾಲ್ಗೊಂಡಿದ್ದು ಅಲ್ಲದೇ ನಮ್ಮನ್ನು ಉತ್ತೇಜನಗೊಳಿಸಿದ್ದು ನಮ್ಮಲ್ಲಿನ ಉತ್ಸಾಹವನ್ನು ಮತ್ತಷ್ಟು ಮಗದಷ್ಟು ಇಮ್ಮಡಿಗೊಳೊಸಿತು. ಇನ್ನೂ ನಮ್ಮ ಕಂಕಣ ಬಳಗದ ಸಾರಥಿ ಶ್ರೀ ಕವಿರಾಜ್ ಸರ್ ಇವರ ನೇತೃತ್ವದಲ್ಲಿ   ನಡೆದ ನಮ್ಮ ಅಭಿಯಾನವನ್ನು ಬೆಂಬಲಿಸಲು ಬಂದ ಕನ್ನಡದ ಖ್ಯಾತ ಗಾಯಕಿ ಡಾ.ಶಮಿತಾ ಮಲ‍್ನಾಡ್ ಇವರು ತಮ್ಮ ಹಿತನುಡಿ ಕನ್ನಡದ ಮೇಲಿನ ತಮ್ಮ ಪ್ರೀತಿ ಹಾಗೆಯೇ ಸುಂದರವಾದ ಭಾವಗೀತೆ ಹಾಡುವುದರ ಮೂಲಕ ನಮ್ಮ ಬಳಗದ ಪ್ರತಿಯೊಬ್ಬರ ಹೃದಯವನ್ನು ಗೆದ್ದರು. ಇನ್ನು ನಮ್ಮ ಬಳಗಕ್ಕೆ ಹೊಸದಾಗಿ ಸೇರಿದ ಅನೇಕ ಉತ್ಸಾಹಿ ಸದಸ್ಯರು ಹಾಗೂ ನಮ್ಮ ಬಳಗದಲ್ಲಿ ಮೊದಲಿನಿಂದ ಇರುವ ಸದಸ್ಯರ ಸಕ್ರಿಯ ಪಾಲ್ಗೊಳ್ಳುವಿಕೆ ಅಭಿಯಾನದ ಯಶಸ್ವಿಗೆ ಪ್ರಮುಖ ಕಾರಣ. ಹೀಗೆ ನಮ್ಮ ಈ ಕನ್ನಡಮ್ಮನ ಸೇವೆ ಮುಂದುವರೆಯಲಿ ಹಾಗೆ ನಿಮ್ಮೆಲ್ಲರ ಪ್ರೀತಿಪೂರ್ವಕ ಸಹಕಾರ ನಮ್ಮ ಬಳಗದ ಮೇಲೆ ಇರಲಿ. ಕನ್ನಡದ ಹಿರಿಮೆ ಈ ಜಗತ್ತಿಗೆ ತಿಳಿಯುವಂತೆ ಆಗಲಿ ಎಂಬುದೆ ನಮ್ಮ ಆಶಯ.
ಧನ್ಯವಾದಗಳೊಂದಿಗೆ ,

ನಿಮ್ಮ ಪ್ರವೀಣ ಕಾಗಾಲ.