ನಮಸ್ತೇ ಕನ್ನಡದ ಮನಸ್ಸುಗಳಿಗೆ....
ಜೀವನ ಸಾರ್ಥಕ ಅನಿಸಿದ ದಿನ. ನಿಜ ಹುಟ್ಟಿದರೇ ಕನ್ನಡ ನಾಡಿನಲ್ಲಿ ಹುಟ್ಟಬೇಕು. ಮೆಟ್ಟಿದರೆ ಕನ್ನಡ ಮಣ್ಣನು ಮೆಟ್ಟಬೇಕು. ನಿಜಕ್ಕೂ ನಾವು ಈ ಪುಣ್ಯಭೂಮಿಯಲ್ಲಿ ಜನ್ಮತಾಳಿರುವುದು ಹೆಮ್ಮೆಯ ವಿಷಯ. ಇನ್ನೊಂದು ಜನ್ಮ ಎನ್ನುವುದು ಇದ್ದರೆ ಮತ್ತೇ ಈ ಕರುನಾಡಿನಲ್ಲಿ ಹುಟ್ಟಬೇಕು ಇದೇ ನಮ್ಮೆಲ್ಲರ ಆಸೆ. ನಿನ್ನೆ ನಡೆದ ಕನ್ನಡ ರಾಜ್ಯೋತ್ಸವದ ಸಂಭ್ರಮ ಇಷ್ಟೊಂದು ಅಧ್ದೂರಿಯಾಗಿ ನಡೆಯುತ್ತೆ ಅನ್ನೋ ಕಲ್ಪನೆ ಕೂಡ ಇರಲಿಲ್ಲ. ಕನ್ನಡದ ಮನಸುಗಳ ತಂಡದಲ್ಲಿ ಇದ್ದರು ಪೂರ್ವಭಾವಿ ಕೆಲಸಕ್ಕೆ ಬರಲು ಆಗದೇ ಇರುವುದು ಬೇಸರ ತಂದರೂ ಇಂತಹದೊಂದು ಸುಂದರ ಕ್ಷಣಗಳಲ್ಲಿ ನಾನು ಕೂಡ ಭಾಗಿಯಾಗಿ ಕನ್ನಡಮ್ಮನ ಸೇವೆಯಲ್ಲಿ ನನ್ನದೊಂದು ಅಲ್ಪಕಾಣಿಕೆ ನೀಡಿರುವುದು ಸಂತಸ ತಂದಿದೆ. ಒಮ್ಮೆ ಬರದೇ ಇದ್ದರೆ ನಿಜಕ್ಕೂ ಬೇಸರ ಆಗುತಿತ್ತು. ಉತ್ತರ ಭಾರತ ಪ್ರವಾಸ ಮುಗಿಸಿಕೊಂಡು ಬಂದಿದ್ದೆ ಕನ್ನಡ ಹಬ್ಬದ ಹಿಂದಿನ ದಿನ.
ಒಂದಲ್ಲ ಒಂದು ಚಟುವಟಿಕೆಗಳಿಂದ ನಿತ್ಯವೂ ಕನ್ನಡದ ಸೇವೆ ಮಾಡುತ್ತ ನಾವು ನವೆಂಬರ್ ಕನ್ನಡಿಗರಲ್ಲ ಅನ್ನೋದನ್ನು ನಿರೂಪಿಸಿದ ಕನ್ನಡ ಮನಸುಗಳ ತಂಡವು ಇದೇ ರೀತಿ ನವನವೀನ ಕಾರ್ಯಕ್ರಮ ನಡೆಸುತ್ತಾ ಇರಲಿ. ಈ ನಮ್ಮ ಕನ್ನಡ ಭಾಷೆ ಜಗತ್ತಿನಾದ್ಯಂತ ಪಸರಿಸಲು ಮುನ್ನುಡಿ ಬರೆಯಲಿ ಇದೇ ನಮ್ಮ ಹಂಬಲ.
ಸಾವಿರಾರು ವರ್ಷಗಳ ಇತಿಹಾಸ ಇರುವ ಈ ನಮ್ಮ ಕನ್ನಡ ಭಾಷೆಯ ಮಹತ್ವವನ್ನು ಈ ಜಗತ್ತಿಗೆ ತಿಳಿಸುವ ಕಾರ್ಯ ನಮ್ಮಿಂದಾಗಲಿ.
ನಿನ್ನೆಯ ಕಾರ್ಯಕ್ರಮದ ಬಗ್ಗೆ ಹೇಳಲು ಮಾತುಗಳೇ ಹೊರಡುತ್ತಿಲ್ಲ. ಇತಿಹಾಸದ ಪುಟಗಳಲ್ಲಿ ಸೇರಿದ ಒಂದು ಕಾರ್ಯಕ್ರಮ. ದಾಖಲೆಯ ೨೦೪೦ ಮೀಟರ್ ಉದ್ದದ ಕನ್ನಡ ಭಾವುಟದ ಭವ್ಯ ಮೆರವಣಿಗೆ, ಕನ್ನಡ ಹಾಡುಗಳ ಕಲರವ, ಜಾನಪದ ಸೊಗಡಿನ ನೃತ್ಯ, ಕನ್ನಡ ಫೋಷಣೆಗಳು ಮುಗಿಲು ಮುಟ್ಟುವಂತೆ ಮಾಡಿದ ಕನ್ನಡಾಭಿಮಾನಿಗಳ ಉತ್ಸಾಹ, ಆರೂ ಕಿ.ಮೀ ಸಾಗಿದರೂ ಯಾರೊಬ್ಬರ ಮೊಗದಲ್ಲಿಯೂ ದಣಿಯರಿಯದ ಉತ್ಸಾಹ, ಹೊಸ ಭಾಷ್ಯ ಬರೆದ ಸಂಚಾರಿ ಕವಿಗೊಷ್ಠಿ, ಅನೇಕ ಗಣ್ಯವ್ಯಕ್ತಿಗಳು ನಮ್ಮೆಲ್ಲರ ಜೊತೆ ಪಾಲ್ಗೊಂಡು ನಮ್ಮ ಕಾರ್ಯವನ್ನು ಬೆಂಬಲಿಸಿದ್ದು, ಹಾಗೇ ನಾನು ಇಷ್ಟಪಡುವ ನನ್ನ ಪ್ರೀತಿಯ ಸ್ನೇಹಲೋಕ ಗೆಳೆಯರ ಬಳಗದ ಆಗಮನ, ಮುದ್ದು ಮುದ್ದು ಮನಸ್ಸಿನ ವಿದ್ಯಾರ್ಥಿಗಳ ಹುರುಪು, ನಮ್ಮ ಜೊತೆ ಬಂದು ನಮ್ಮೆಲ್ಲರ ರಕ್ಷಣೆಗೆ ನಿಂತ ಆರಕ್ಷಕರ ಶ್ರಮ, ಟ್ರಾಫಿಕ್ ಜಾಮ್ ಆದರೂ ಪರವಾಗಿಲ್ಲ ಕನ್ನಡ ಹಬ್ಬದ ಸೇವೆಗೆ ಜೈ ಅಂದ ಸಾರ್ವಜನಿಕರ ಬೆಂಬಲ ಇನ್ನೇನೂ ಹೇಳಲಿ ಈ ನಮ್ಮ ಕನ್ನಡ ಹಬ್ಬದ ಸಂಭ್ರಮ ಎಲ್ಲೆಲ್ಲೂ ಪಸರಿಸುವಂತೆ ಮಾಡಿರೋದು ನಾವೆಲ್ಲರೂ ಹೆಮ್ಮೆ ಪಡುವ ವಿಷಯ.
ಇನ್ನೂ ಈ ಒಂದು ಕಾರ್ಯಕ್ರಮ ಇಷ್ಟೊಂದು ದೊಡ್ಡ ಮಟ್ಟಿಗೆ ಯಶಸ್ಸು ಕಾಣಬೇಕಾದರೆ ಅದರ ಹಿಂದೆ ಒಂದು ದೊಡ್ಡ ಶಕ್ತಿಯೇ ಇರಬೇಕು. ಇಲ್ಲದಿದ್ದರೆ ಯಾವುದು ಸಾಧ್ಯವಿಲ್ಲ. ಈ ಕಾರ್ಯಕ್ರಮದ ಸಲುವಾಗಿ ಹಗಲಿರುಳು ಎನ್ನದೇ ಶ್ರಮಿಸಿದ ಕನ್ನಡ ಮನಸುಗಳ ತಂಡಕ್ಕೆ ತುಂಬು ಹೃದಯದ ಧನ್ಯವಾದಗಳು. ನಿಮ್ಮ ಈ ನಿಷ್ಕಲ್ಮಶ ಸೇವೆಯೇ ಇಂದಿನ ಈ ದಾಖಲೆಯ ಯಶಸ್ಸಿಗೆ ಮೂಲ ಕಾರಣ ಈ ನಿಮ್ಮ ಕಾರ್ಯದಲ್ಲಿ ನನ್ನನ್ನು ಜೊತೆಯಾಗಿ ಕನ್ನಡದ ಸೇವೆ ಮಾಡಲು ಅವಕಾಶ ಮಾಡಿಕೊಟ್ಟ ಪ್ರತಿಯೊಬ್ಬರಿಗೂ ತುಂಬು ಹೃದಯದ ಧನ್ಯವಾದಗಳು. ನಿಮ್ಮಲ್ಲಿನ ಈ ಉತ್ಸಾಹ, ಅಭಿಮಾನ ಸದಾ ಹೀಗೆ ಇರಲಿ. ನಾಡಿನಾದ್ಯಂತ ಈ ನಮ್ಮ ಕನ್ನಡದ ಕಂಪು ಹರಡಲಿ. ಕನ್ನಡ ನಮ್ಮೆಲ್ಲರ ಉಸಿರಾಗಲಿ ಇದೇ ನಮ್ಮೆಲ್ಲರ ಆಶಯ.
ಜೈ ಕರ್ನಾಟಕ ಮಾತೆ.
~ ಪ್ರವೀಣ ಕಾಗಾಲ.
ಕುಮಟಾ. ಉತ್ತರ ಕನ್ನಡ ಜಿಲ್ಲೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ