ಮಂಗಳವಾರ, ಫೆಬ್ರವರಿ 28, 2017

ಯುವ ಬಳಗದ ಸಾರ್ಥಕ ಕೆಲಸ.

ಕುಮಟಾದ ಬರ್ಗಿಯಲ್ಲಿ ಆಗ ತಾನೇ ಸೂರ್ಯ ಹುಟ್ಟುವ ಮುಂಚೆ ಒಂದು ಆಘಾತಕಾರಿ ಯಾರೂ ಕೂಡ ಊಹಿಸಲು ಅಸಾಧ್ಯವಾದ ಒಂದು ಘಟನೆ ನಡೆದುಹೋಗಿತ್ತು. ಗ್ಯಾಸ್ ಟ್ಯಾಂಕರ್ ಅಪಘಾತದಿಂದ ಒಂದು ಕುಟುಂಬವೇ ಇನ್ನಿಲ್ಲವಾಗಿತ್ತು. ಇಡೀ ಊರಿಗೇ ಊರೇ ಮುಂಜಾನೆಯೇ ಈ ಘಟನೆಯಿಂದ ಬೆಚ್ಚಿಬಿದ್ದಿತ್ತು. ಅಂದು ಸಾವನ್ನಪ್ಪಿದ್ದವರಲ್ಲಿ ಗ್ರಾಮ ಒಕ್ಕಲು ಸಮಾಜದ ಕುಟುಂಬವೇ ಒಂದು. ಆ ಘಟನೆಯ ತರುವಾಯ ಗ್ರಾಮ ಒಕ್ಕಲು ಸಮಾಜದಲ್ಲಿ ಯುವ ಶಕ್ತಿ ಒಂದಾಗಬೇಕೆಂದು ಕೆಲ ಯುವ ಮನಸ್ಸುಗಳು ತೀರ್ಮಾನ ಮಾಡಿ "ಗ್ರಾಮ ಒಕ್ಕಲು ಯುವ ಬಳಗ" ಎಂಬ ಸಂಘಟನೆಯನ್ನು ಕಟ್ಟಿಕೊಂಡು ಸಮಾಜದ ಬಂಧು ಭಾಂಧವರ ಸಹಾಯಕ್ಕೆ ಟೊಂಕ ಕಟ್ಟಿ ನಿಂತಿತು. ಅಪಘಾತದಲ್ಲಿ ಗಾಯಗೊಂಡವರಿಗೆ ಸಹಾಯ ಧನ ಹಾಗೇ ಅವಶ್ಯಕ ಸಂದರ್ಭಗಳಲ್ಲಿ ರಕ್ತ ದಾನ ಮಾಡಿ ಇನ್ನೊಂದು ಜೀವವನ್ನು ಉಳಿಸುವ ಮಹಾತ್ಕಾರ್ಯ ಮಾಡಿರೋದು ಅಭಿನಂದನಿಯ. ಇಂತಹ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತ ಬಂದಿರುವ ಈ ಯುವ ಬಳಗ ಮದ್ಗುಣಿ ಸಂಘದ ಸಹಕಾರದ ಜೊತೆಗೆ ಸೇರಿ ಅಪಘಾತ ನಿಧಿ ಇನ್ನಷ್ಟು ಕ್ರೋಢೀಕರಿಸಲು "ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿ"ಯನ್ನು ಅಯೋಜಿಸಿ ಅತ್ಯಂತ ಯಶಸ್ವಿಯಾಗಿ ನಡೆಸಿ ಸಮಾಜದ ಹಿರಿಯರ ಹಾಗೂ ಹಿತೈಷಿಗಳಿಂದ ಹೊಗಳುವಿಕೆಗೆ ಕಾರಣವಾಯಿತು. ಸಮಾಜಕ್ಕೆ ಏನಾದರೂ ಒಳ್ಳೆಯದು ಮಾಡಬೇಕೆಂಬ ಉತ್ಕಟವಾದ ಕನಸನ್ನು ಹೊತ್ತಿರುವ ಯುವ ಬಳಗದ ಶ್ರಮ ನಿಜಕ್ಕೂ ಸಾರ್ಥಕ ಆಯಿತು. ಯುವ ಬಳಗದ ಜೊತೆ ಹಗಲಿರುಳು ಶ್ರಮೀಸಿದ ಮದ್ಗುಣಿ ಯುವಕ ಸಂಘದ ಎಲ್ಲಾ ಸದಸ್ಯರು ಅಭಿನಂದನೆಗೆ ಅರ್ಹರಾಗಿದ್ದಾರೆ. ನಿಮ್ಮ ಶ್ರಮಕ್ಕೆ ಆ ದೇವರು ಖಂಡಿತ ಒಳ್ಳೆಯದು ಮಾಡುತ್ತಾನೆ. ನಿಮ್ಮ ಈ ಸೇವೆ ಹೀಗೆ ಮುಂದುವರೆಯಲಿ. ಹಾಗೇ ವಾಲಿಬಾಲ್ ಪಂದ್ಯಾವಳಿಗೆ ಯಶಸ್ಸಿಗೆ ಕಾರಣರಾದ ಎಲ್ಲಾ ಕ್ರೀಡಾಪಟುಗಳು ಹಾಗೂ ಕ್ರೀಡಾಭಿಮಾನಿಗಳು ನಿಮ್ಮನ್ನು ಮರೆಯಲು ಆದಿತೇ.. ಆಟ ಒಂದೇ ಅಲ್ಲ ಇನ್ನೂ ಮುಂದೆ ಯುವ ಬಳಗದ ಉದ್ದೇಶ ಹಾಗೂ ಮುಂದಿನ ಕಾರ್ಯಗಳಲ್ಲಿ ನಿಮ್ಮ ಕೈ ಜೋಡಿಸಿ ..
ನಮ್ಮ ಸಮಾಜವನ್ನು ಈ ಜಗತ್ತಿಗೆ ಪರಿಚಯಿಸೋಣ. ಏನಂತೀರಾ...

ಧನ್ಯವಾದಗಳೊಂದಿಗೆ..

ನಿಮ್ಮ ಪ್ರವೀಣ ಕಾಗಾಲ.
ಬೆಂಗಳೂರು.

ಸೋಮವಾರ, ಫೆಬ್ರವರಿ 27, 2017

ನ್ಯಾನೋ ಕತೆ..

ಇನ್ನೇನೂ ಸಂಜೆಯಾಗುವ ಸಮಯ.  ಸಮುದ್ರದ ತೀರದಲ್ಲಿ ಅವಳು ಒಬ್ಬಳೇ ಯಾರಿಗಾಗೋ ಕಾಯುತ್ತಿರುವ ದೃಶ್ಯ ಕಣ್ಣಿಗೆ ಬಿತ್ತು. ಹತ್ತಿರ ಹೋಗಿ ಕೇಳುವ ಮನಸ್ಸಾದರೂ ಯಾಕೋ ಅಂಜಿಕೆ. ಆದರೂ ಧೈರ್ಯ ಮಾಡಿ ಅವಳ ಕುಳಿತಿರೋ ಜಾಗದ ಬಳಿ ಹೆಜ್ಜೆ ಹಾಕುತ್ತ ಧಾವಿಸಿದೆ. ಸ್ವಲ್ಪ ದೂರವೇ ನಿಂತು ಅವಳ ಮುಖದ ಭಾವನೆಯನ್ನು ಗಮನಿಸಿದೆ ಕಣ್ಣಂಚಿನಿಂದ ಒಂದೊಂದೆ ಹನಿ ಸಮುದ್ರದ ತೀರವನ್ನು ಸೇರುತ್ತಾ ಇತ್ತು. ಯಾಕೋ ಅವಳನ್ನು ಮಾತಾನಾಡಿಸಿ ಏನಾಯ್ತು ಅಂತ ಕೇಳಬೇಕು ಅಂತ ಹೇಳಿ ಹೋಗಿ ಮಾತನಾಡಿಸಿದೆ. ಅವಳಿಂದ ಬಂದ ಉತ್ತರ ಎಕೋ ಮನಸ್ಸನ್ನೇ ಒಂದು ಸಲ ಕಲ್ಲಾಗುವಂತೆ ಮಾಡಿತು. ಅವಳ ಸಮುದ್ರದಲ್ಲಿ ಈಜಾಡುವ ಹುಚ್ಚಿಗೆ ತನ್ನ ಹೆತ್ತ ತಂದೆಯನ್ನೇ ಕಳೆದುಕೊಂಡೆ ಎಂದು. ಸಮುದ್ರದಲ್ಲಿ ಮುಳುಗುತ್ತಿರುವ ಮಗಳನ್ನು ರಕ್ಷಿಸಲು ಹೋಗಿ ತಂದೆ ಸಮುದ್ರ ಪಾಲಾಗಿದ್ದು ಅವಳ ಪಾಲಿಗೆ ಬದುಕು ಸತ್ತಂತೆ ಭಾಸವಾಗಿದೆ. ಇನ್ನೂ ತನ್ನ ತಂದೆ ಬದುಕಿ ಬರುತ್ತಾನೆ ಎಂಬ ಆಸೆಯಿಂದ ಅವಳ ಕಂಗಳು ಅತ್ತಿಂದಿತ್ತ ಹುಡುಕುತ್ತ ಇದೆ.

        ಪ್ರವೀಣ ಕಾಗಾಲ.ಕುಮಟಾ.

ಭಾನುವಾರ, ಫೆಬ್ರವರಿ 26, 2017

ಕಂಕಣ ಅಭಿಯಾನ

"ಕನ್ನಡ" ಈ ಪದ ಕೇಳೋಕೆ ಎಷ್ಟು ಚೆಂದ ಅಲ್ವಾ...! ನಿಜ ನಮ್ಮ ಕರುನಾಡಿನ ಈ ಹೆಮ್ಮೆಯ ನುಡಿ ನಮ್ಮ ಈ ಕನ್ನಡ. ಪ್ರತಿಯೊಬ್ಬರ ಹೃದಯದಲ್ಲಿ ವಿರಾಜಮನವಾಗಬೇಕಿದ್ದ ಕನ್ನಡ ಇಂದು ನಮ್ಮ ಈ ಬೆಂಗಳೂರಿನ ಕೆಲವು ಕನ್ನಡಿಗರಿಂದ ಮರೆಯಾಗುತ್ತಿರುವುದು ವಿಷಾದನೀಯ. ಕನ್ನಡಿಗರೇ ಕನ್ನಡ ಮಾತನಾಡದಿದ್ದರೆ ನಮ್ಮ ಭಾಷೆಯ ಸ್ಥಿತಿ ಏನಾಗಬಹುದು ಅಂತ ಒಮ್ಮೆ ಯೋಚಿಸಿ ಕನ್ನಡ ಬಂದರೂ ಕೂಡ ತಾವು ದಿನಂಪ್ರತಿ ವ್ಯವಹಾರ ಮಾಡುವ ಸ್ಥಳಗಳಲ್ಲಿ ಮಾತನಾಡದೆ ಇತರ ಭಾಷೆಯನ್ನು ಮಾತನಾಡುವುದು ಎಷ್ಟರಮಟ್ಟಿಗೆ ಸರಿ. ಕನ್ನಡ ಭಾಷೆಯ ಬೆಳವಣಿಗೆಗೆ ಕೊಡುಗೆ ನೀಡಬೇಕಾದ ನಾವೇ ಈ ತರ ಮಾಡಿದರೆ ಕನ್ನಡ ಭಾಷೆಯು ಜಗತ್ತಿನಾದ್ಯಂತ ಪಸರಿಸುವುದಾದರೂ ಹೇಗೆ.. ಇದೇ ಉದ್ದೇಶವನ್ನು ಇಟ್ಟುಕೊಂಡು ಕಳೆದ ಎರಡು ವರ್ಷಗಳ ಹಿಂದೆ ಜನ್ಮ ತಾಳಿದ ನಮ್ಮ ಕಂಕಣ ಬಳಗ ಕನ್ನಡಿಗರೇ ಕನ್ನಡ ಮಾತಾಡಿ ಎಂಬ ಅಭಿಯಾನವನ್ನು ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ಮಾಡುತ್ತಿರುವುದು ನಿಮಗೆಲ್ಲರಿಗೂ ಸಾಮಾಜಿಕ ಜಾಲತಾಣದ ಮೂಲಕ ಗೊತ್ತೆ ಇದೆ ಅದರ ಮುಂದುವರಿದ ಭಾಗ ಎನ್ನುವಂತೆ ಇಂದು ಸೂರ್ಯ ತನ್ನ ದಿನನಿತ್ಯದ ಕೆಲಸ ಆರಂಭ ಮಾಡುವ ಮುಂಚೆಯೇ ಕನ್ನಡಕ್ಕಾಗಿ ಕಂಕಣ ತೊಟ್ಟಿರುವ ನಮ್ಮ ಬಳಗದ ಸದಸ್ಯರು ಕಬ್ಬನ್ ಪಾರ್ಕಿನ ಪಾದಚಾರಿ ಮಾರ್ಗದಲ್ಲಿ ನಿಂತು ಕನ್ನಡ ಘೋಷವಾಕ್ಯ ಇರುವ ಫಲಕಗಳನ್ನು ಹಿಡಿದು ನಿಂತು ಕನ್ನಡದ ಡಿಂಡಿಮವನ್ನು ಸಾರಿದರು. ನಮ್ಮ ಅಭಿಯಾನದ ಸ್ಥಳದಲ್ಲಿ ಇಂದು ಮ್ಯಾರಥಾನ್ ಕೂಡ ಇದ್ದರಿಂದ ನಮ್ಮ ಅಭಿಯಾನದ ಮೂಲಕ ಕನ್ನಡ ಉಳಿಸಿ ಕೂಗು ಅತಿ ಹೆಚ್ಚು ಜನರನ್ನು ತಲುಪವಲ್ಲಿ ಯಶಸ್ವಿಯಾಯಿತು.  ಸುಮಾರು ಐದರಿಂದ ಆರು ಸಾವಿರ ಜನರಲ್ಲಿ ಕೆಲವರಾದರೂ ನಮ್ಮ ಅಭಿಯಾನದ ಉದ್ದೇಶ ತಿಳಿದುಕೊಂಡು ನಮ್ಮ ಜೊತೆ ಪಾಲ್ಗೊಂಡಿದ್ದು ಅಲ್ಲದೇ ನಮ್ಮನ್ನು ಉತ್ತೇಜನಗೊಳಿಸಿದ್ದು ನಮ್ಮಲ್ಲಿನ ಉತ್ಸಾಹವನ್ನು ಮತ್ತಷ್ಟು ಮಗದಷ್ಟು ಇಮ್ಮಡಿಗೊಳೊಸಿತು. ಇನ್ನೂ ನಮ್ಮ ಕಂಕಣ ಬಳಗದ ಸಾರಥಿ ಶ್ರೀ ಕವಿರಾಜ್ ಸರ್ ಇವರ ನೇತೃತ್ವದಲ್ಲಿ   ನಡೆದ ನಮ್ಮ ಅಭಿಯಾನವನ್ನು ಬೆಂಬಲಿಸಲು ಬಂದ ಕನ್ನಡದ ಖ್ಯಾತ ಗಾಯಕಿ ಡಾ.ಶಮಿತಾ ಮಲ‍್ನಾಡ್ ಇವರು ತಮ್ಮ ಹಿತನುಡಿ ಕನ್ನಡದ ಮೇಲಿನ ತಮ್ಮ ಪ್ರೀತಿ ಹಾಗೆಯೇ ಸುಂದರವಾದ ಭಾವಗೀತೆ ಹಾಡುವುದರ ಮೂಲಕ ನಮ್ಮ ಬಳಗದ ಪ್ರತಿಯೊಬ್ಬರ ಹೃದಯವನ್ನು ಗೆದ್ದರು. ಇನ್ನು ನಮ್ಮ ಬಳಗಕ್ಕೆ ಹೊಸದಾಗಿ ಸೇರಿದ ಅನೇಕ ಉತ್ಸಾಹಿ ಸದಸ್ಯರು ಹಾಗೂ ನಮ್ಮ ಬಳಗದಲ್ಲಿ ಮೊದಲಿನಿಂದ ಇರುವ ಸದಸ್ಯರ ಸಕ್ರಿಯ ಪಾಲ್ಗೊಳ್ಳುವಿಕೆ ಅಭಿಯಾನದ ಯಶಸ್ವಿಗೆ ಪ್ರಮುಖ ಕಾರಣ. ಹೀಗೆ ನಮ್ಮ ಈ ಕನ್ನಡಮ್ಮನ ಸೇವೆ ಮುಂದುವರೆಯಲಿ ಹಾಗೆ ನಿಮ್ಮೆಲ್ಲರ ಪ್ರೀತಿಪೂರ್ವಕ ಸಹಕಾರ ನಮ್ಮ ಬಳಗದ ಮೇಲೆ ಇರಲಿ. ಕನ್ನಡದ ಹಿರಿಮೆ ಈ ಜಗತ್ತಿಗೆ ತಿಳಿಯುವಂತೆ ಆಗಲಿ ಎಂಬುದೆ ನಮ್ಮ ಆಶಯ.
ಧನ್ಯವಾದಗಳೊಂದಿಗೆ ,

ನಿಮ್ಮ ಪ್ರವೀಣ ಕಾಗಾಲ.