ಅದು ಜಿಲ್ಲೆಯ ಪ್ರತಿಷ್ಠಿತ ಕಾಲೇಜು. ಆ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಆ ಊರಿನ ಆಗರ್ಭ ಶ್ರೀಮಂತರಾದ ಗೋವಿಂದರಾಯರು ವಹಿಸಿಕೊಂಡಿದ್ದರು. ಇವರು ಶ್ರೀಮಂತರಾದರು ತುಂಬಾ ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದರು. ಇವರ ಒಬ್ಬನೇ ಮಗನ ಹೆಸರು ರಾಜೀವ. ಇವನೋ ತನ್ನ ತಂದೆಯ ನಡುವಳಿಕೆಗೆ ವಿರುದ್ಧವಾಗಿದ್ದವನು. ತನ್ನ ಶ್ರೀಮಂತಿಕೆಯ ದರ್ಪ ಇವನಲ್ಲಿ ಅತಿಯಾಗಿ ತುಂಬಿಕೊಂಡಿತ್ತು. ಇವನು ಕೂಡ ಅದೇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುತ್ತಾನೆ.
ಅದೇ ಕಾಲೇಜಿನಲ್ಲಿ ಮಧ್ಯಮ ವರ್ಗದ ಕುಟುಂಬದಿಂದ ಬಂದಂತಹ ನಳಿನಿಯು ಕೂಡ ಓದುತ್ತಿರುತ್ತಾಳೆ. ಅವಳು ಓದಿನಲ್ಲಿ ತುಂಬಾ ಜಾಣೆ ಹಾಗೇ ನೋಡಲು ಕೂಡ ಸ್ಪುರದ್ರೂಪಿ ಆಗಿದ್ದಳು. ಇವಳ ಈ ಸೌಂದರ್ಯವನ್ನು ಕಂಡು ಅನೇಕ ಜನರು ಪ್ರೀತಿಸಲು ಹೋಗಿ ನಿರಾಶರಾಗಿದ್ದರು. ಹೀಗೆ ಒಂದು ದಿನ ರಾಜೀವನು ಕೂಡ ಇವಳನ್ನು ನೋಡಿ ತುಂಬಾ ಆಕರ್ಷಿತನಾಗುತ್ತಾನೆ. ಇವಳನ್ನು ಹೇಗಾದರು ಮಾಡಿ ತನ್ನ ಬಲೆಗೆ ಹಾಕಿಕೊಳ್ಳಬೇಕೆಂದು ನಿರ್ಧರಿಸಿ ಮೊದಲು ಅವಳಿಗೆ ತನ್ನ ಸ್ನೇಹದ ಹಸ್ತವನ್ನು ಚಾಚುತ್ತಾನೆ. ಒಳ್ಳೆಯ ಅಸಾಮಿಯಂತೆ ಸೋಗು ಹಾಕಿ ಅವಳ ಗೆಳೆತನವನ್ನು ಕೂಡ ಪಡೆಯುವಲ್ಲಿ ಯಶಸ್ವಿಯಾಗುತ್ತಾನೆ. ಇತ್ತ ನಳಿನಿಯು ಕೂಡ ಇವನ ಒಳ್ಳೆತನದ ನಾಟಕವನ್ನು ನಂಬಿ ತನ್ನ ಜೀವನದ ಕಷ್ಟ ಸುಖಗಳನ್ನೆಲ್ಲಾ ಹಂಚಿಕೊಳ್ಳುತ್ತಾಳೆ.
ಇದೂ ಅನೇಕ ದಿನಗಳವರೆಗೆ ಮುಂದುವರೆಯುತ್ತದೆ..
ಒಂದು ದಿನ ರಾಜೀವನು ನಳಿನಿಯ ಹತ್ತಿರ ಬಂದು ತನ್ನ ಪ್ರೀತಿಯ ವಿಷಯವನ್ನು ಪ್ರಸ್ತಾಪ ಮಾಡುತ್ತಾನೆ. ಮೊದಮೊದಲು ಒಪ್ಪದ ನಳಿನಿಯು ಕೊನೆಗೆ ಇವನ ಒಳ್ಳೆತನದ ಮರಳು ಮಾತಿಗೆ ಬಿದ್ದು ಪ್ರೀತಿ ಮಾಡಲು ಪ್ರಾರಂಭಿಸುತ್ತಾಳೆ..!
ಮೊದಲೇ ಹೆಣ್ಣಿನ ಬಗ್ಗೆ ಅತಿಯಾದ ಚಪಲ ಚೆನ್ನಿಗನಾಗಿರುವ ವಿಷಯ ನಳಿನಿಗೆ ಗೊತ್ತೇ ಇರುವುದಿಲ್ಲ.
ಹೀಗೆ ಪ್ರೀತಿಯನ್ನು ಮಾಡುತ್ತ ಅನೇಕ ದಿನಗಳವರೆಗೆ ಒಬ್ಬರನ್ನೊಬ್ಬರು ಪ್ರೇಮಲೋಕದಲ್ಲಿ ವಿಹರಿಸುತ್ತಾ ಇರುತ್ತಾರೆ.
ಹೀಗಿರುವಾಗ ಒಂದು ದಿನ ಇವರಿಬ್ಬರೂ ನಂದಿಬೆಟ್ಟಕ್ಕೆ ಪ್ರವಾಸಕ್ಕೆ ಹೋಗಬೇಕೆಂದು ನಿರ್ಧರಿಸಿ ತೆರಳುತ್ತಾರೆ. ಅಲ್ಲಿ ಇಲ್ಲಿ ಸುತ್ತಾಡಿ ಒಂದು ಕಡೆ ಕುಳಿತು ಮಾತನಾಡುತ್ತಿರುವಾಗ ರಾಜೀವನ ಮಾತು ಕೇಳಿ ನಳಿನಿಯು ಒಮ್ಮೆಲೆ ದಿಗಿಲುಬಡಿದಂತೆ ಕುಳಿತುಕೊಳ್ಳುತ್ತಾಳೆ. ಆಗ ಅವಳಿಗೆ ಅರಿವಾಗುತ್ತದೆ. ರಾಜೀವನಿಗೆ ಬೇಕಾಗಿದ್ದು ತನ್ನ ನಿಷ್ಕಲ್ಮಶ ಪ್ರೀತಿಯಲ್ಲ.. ಕೇವಲ ದೈಹಿಕ ಸುಖವೆಂದು.. ಇದನ್ನು ತಿಳಿದು ಅವನಿಗೆ ಅಲ್ಲಿಯೇ ಛೀಮಾರಿ ಹಾಕುತ್ತಾಳೆ. ಇದರಿಂದ ಕೋಪಿತನಾದ ರಾಜೀವನು ಅವಳನ್ನು ಹೊಡೆದು ಹೇಗಾದರೂ ಇವಳಿಂದ ದೈಹಿಕ ಸುಖ ಪಡೆಯಬೇಕೆಂದು ಪ್ರಯತ್ನ ಪಡುತ್ತಾನೆ. ಇತ್ತ ನಳಿನಿಯು ಅವನ ಕಪಿಮುಷ್ಠಿಯಿಂದ ಅಲ್ಲಿದ್ದ ಕೆಲ ಪ್ರವಾಸಿಗರ ಸಹಾಯದಿಂದ ಪಾರಾಗುತ್ತಾಳೆ. ಅಲ್ಲಿದ್ದ ಪ್ರವಾಸಿಗರು ಅವನನ್ನು ಚೆನ್ನಾಗಿ ತಳಿಸುತ್ತಾರೆ. ಹಾಗೇ ಅಲ್ಲಿಂದ ಪಾರಾದ ನಳಿನಿಯು ಆ ಊರನ್ನು ಬಿಟ್ಟು ಬೇರೆ ಊರಿಗೆ ಹೋಗಿ ನೆಲೆಸುತ್ತಾಳೆ. ಕಾಲೇಜು ಕೂಡ ಮುಗಿದಿರುತ್ತದೆ.
ಇತ್ತ ಗೋವಿಂದರಾಯರು ಮಗನ ಕಾಲೇಜು ವ್ಯಾಸಂಗ ಮುಗಿಯುತ್ತಿದ್ದಂತೆ ಮದುವೆ ಮಾಡಲು ನಿರ್ಧರಿಸುತ್ತಾರೆ. ಆದರೆ ರಾಜೀವನ ಸರಸ ಸಲ್ಲಾಪದ ವಿಷ್ಯ ಇಡೀ ಊರಿಗೆ ಗೊತ್ತಿದ್ದರಿಂದ ರಾಜೀವನಿಗೆ ಯಾರೂ ಕೂಡ ಹೆಣ್ಣು ಕೊಡಲು ಮುಂದೆ ಬರುವುದಿಲ್ಲ. ಇದರಿಂದ ಗೋವಿಂದರಾಯರು ತುಂಬಾ ಚಿಂತಾಕ್ರಾಂತರಾಗುತ್ತಾರೆ. ತನ್ನ ಮಗ ಮಾಡಿದ ತಪ್ಪಿನಿಂದ ತನ್ನ ಮನೆಯ ಮಾನ ಮರ್ಯಾದೆ ಎಲ್ಲಾ ಹಾಳಾಯಿತು ಎಂದೂ ದುಃಖ ಪಡುತ್ತಾರೆ. ಆ ಊರಿನಲ್ಲಿ ತನಗೆ ಇದ್ದ ಅಪಾರವಾದ ಗೌರವಕ್ಕೆ ಕಪ್ಪುಚುಕ್ಕೆ ಬಂತು ಎಂಬ ಕೊರಗಿನಲ್ಲಿಯೇ ಅವರು ತಮ್ಮ ಪ್ರಾಣವನ್ನು ಬೀಡುತ್ತಾರೆ.
ತನ್ನ ತಂದೆಯ ಸಾವಿನಿಂದ ರಾಜೀವನು ಕುಗ್ಗಿಹೋಗುತ್ತಾನೆ. ತಾನು ಅಂದು ಮಾಡಿದ ತಪ್ಪನ್ನು ನೆನೆದು ಪಶ್ಚಾತ್ತಾಪ ಪಡುತ್ತಾನೆ. ತನ್ನಿಂದ ತನ್ನ ಮನೆತನಕ್ಕೆ ಇದ್ದ ಗೌರವವೆಲ್ಲಾ ಹಾಳಾಯಿತು ಎಂದೂ ಮರುಕಪಟ್ಟು ಇನ್ನೂ ಮುಂದೆ ಆದರೂ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಬಾಳಿ ತನ್ನ ತಂದೆಯ ಹೆಸರನ್ನು ಬೆಳಗಬೇಕೆಂದು ನಿರ್ಧರಿಸಿ ತನ್ನ ತಂದೆ ನಡೆಸುತ್ತಿದ್ದ ಕಾಲೇಜನ್ನು ಅತ್ಯಂತ ಉತ್ತಮ ರೀತಿಯಲ್ಲಿ ನಡೆಸಿಕೊಂಡು ಹೋಗುತ್ತಾನೆ. ಇದಾಗಿ ಮೂರು ನಾಲ್ಕು ವರ್ಷಗಳೇ ಕಳೆಯುತ್ತದೆ.
ಇತ್ತ ನಳಿನಿಯು ಚೆನ್ನಾಗಿ ಓದಿ ಪಾಸಾಗಿ ತಾನು ಕಲಿತಿದ್ದ ಕಾಲೇಜಿಗೆ ಉಪನ್ಯಾಸಕಿಯಾಗಿ ಬರುತ್ತಾಳೆ. ಕಾಲೇಜಿನ ಪ್ರಾಂಗಣದಲ್ಲಿ ನಳಿನಿಯನ್ನು ಕಂಡ ಕೂಡಲೇ ಒಮ್ಮೇಲೆ ಆಶ್ಚರ್ಯ ಹಾಗೂ ಹೇಳತೀರದ ಸಂತಸ ಉಂಟಾಗುತ್ತದೆ. ಇದಾದ ಮರು ಘಳಿಗೆಯಲ್ಲಿ ಅವನಿಗೆ ನಳಿನಿಯ ಮಾತು ಕೇಳಿ ತುಂಬಾ ನಿರಾಶೆಯಾಗುತ್ತದೆ.
ನಳಿನಿಯನ್ನು ಈಗಲಾದರೂ ಒಪ್ಪಿಸಿ ಮದುವೆಯಾಗಬಹುದು ಎಂದೂ ಮನಸ್ಸಿನಲ್ಲಿಯೇ ಅಂದುಕೊಂಡಿದ್ದ ರಾಜೀವನಿಗೆ ನಳಿನಿಯು ತನಗೇ ಈಗಾಗಲೇ ಮದುವೆಯಾಗಿದೆ ಎಂಬ ವಿಷ್ಯ ಹೇಳುತ್ತಲೇ ಒಂದು ಕ್ಷಣ ಕುಸಿದು ಬೀಳುವ ಸ್ಥಿತಿಗೆ ತಲುಪುತ್ತಾನೆ.
ಅಂದು ನಳಿನಿಯಂತ ಒಳ್ಳೆಯ ಹುಡುಗಿಗೆ ತನ್ನ ಆತುರದ ತಪ್ಪಿನಿಂದಾಗಿ ಕೆಟ್ಟ ದಾರಿಯಲ್ಲಿ ಸಾಗಿದ್ದ ನನಗೆ ಇದು ಆಗಬೇಕಾಗಿದ್ದದ್ದೇ ಎಂದೂ ಕಣ್ಣಂಚಿನಿಂದ ನೀರನ್ನು ಸುರಿಸುತ್ತ ಪಶ್ಚಾತ್ತಾಪ ಪಡುತ್ತಾ ತನ್ನ ಕೊನೆ ಉಸಿರಿನ ತನಕ ನಳಿನಿಯ ನೆನಪಲ್ಲೇ ತನ್ನ ಇಡೀ ಜೀವನವನ್ನೂ ಮದುವೆಯಾಗದೇ ಕಾಲ ಕಳೆಯುತ್ತಾನೆ.
ಪ್ರವೀಣ ಕಾಗಾಲ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ